ನವದೆಹಲಿ: ಬ್ರಿಕ್ಸ್ ರಾಷ್ಟ್ರಗಳ ವರ್ಚುಯಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಪಾಕಿಸ್ತಾನದ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.
ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳನ್ನು ಕೂಡ ದೋಷಿ ಎಂದು ಪರಿಗಣಿಸಬೇಕು. ಅಂತಹ ದೇಶಗಳ ಕ್ರಮವನ್ನು ನಾವು ವಿರೋಧಿಸಬೇಕು ಎಂದು ಮೋದಿ ತಿಳಿಸಿದ್ದು, ಐಎಂಎಫ್, ಡಬ್ಲ್ಯುಟಿಒ, ಡಬ್ಲ್ಯೂಹೆಚ್ಒ ಸುಧಾರಿಸಬೇಕು. ವಿಶ್ವಸಂಸ್ಥೆಯಲ್ಲಿ ಕಾಲಕ್ಕೆ ತಕ್ಕಂತೆ ಸುಧಾರಣೆ ಆಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳನ್ನು ಜವಾಬ್ದಾರರನ್ನಾಗಿ ಮಾಡಬೇಕಿದೆ. ಜಗತ್ತು ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆ ಎಂದರೆ ಭಯೋತ್ಪಾದನೆ. ಇದನ್ನು ತಡೆಯಲು ಸಂಘಟಿತ ಕ್ರಮ ಅಗತ್ಯವೆಂದು ಅವರು ಹೇಳಿದ್ದಾರೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಬ್ರಿಕ್ಸ್ ಒಕ್ಕೂಟದ ಸಭೆಯಲ್ಲಿ ಭಾಷಣ ಮಾಡಿದ ಮೋದಿ, ವಿಶ್ವಸಂಸ್ಥೆಯ ತತ್ವಗಳಿಗೆ ಭಾರತ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ದೊಡ್ಡ ಸುಧಾರಣೆ ಪ್ರಕ್ರಿಯೆ ಆರಂಭವಾಗಿದ್ದು, ಆತ್ಮ ನಿರ್ಭರ ಭಾರತ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಭಾರತ ಸ್ವಾವಲಂಬನೆಗೆ ಯತ್ನಿಸುತ್ತಿದೆ. ವಿಶ್ವದ 150 ದೇಶಗಳಿಗೆ ಔಷಧ ರಫ್ತು ಮಾಡಲಾಗಿದೆ. ಕೊರೋನಾ ಲಸಿಕೆಯ ಉತ್ಪಾದನೆ ಮತ್ತು ನೀಡಿಕೆಯಲ್ಲಿಯೂ ನೆರವಾಗಲಿದೆ ಎಂದು ಹೇಳಿದ್ದಾರೆ.