ಬೆಂಗಳೂರು: ಕೊರೊನಾ ಭೀತಿಯಿಂದ ಕಳೆದ 8 ತಿಂಗಳಿಂದ ಬಾಗಿಲು ಮುಚ್ಚಿದ್ದ ಕಾಲೇಜುಗಳು ಇಂದಿನಿಂದ ಪುನರಾರಂಭಗೊಂಡಿದ್ದು, ಸೋಂಕು ಹರಡದಂತೆ ಮುಂಜಾಗೃತಾ ಕ್ರಮವಾಗಿ ಕಾಲೇಜುಗಳಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ರಾಜ್ಯಾದ್ಯಂತ ಇಂದಿನಿಂದ ಪದವಿ, ಎಂಜಿನಿಯರಿಂಗ್, ಡಿಪ್ಲೋಮಾ, ಸ್ನಾತಕೋತ್ತರ ಪದವಿ ತರಗತಿಗಳು ಆರಂಭವಾಗಿದ್ದು, ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ನೇರ ತರಗತಿಗಳು ನಡೆಯುತ್ತಿವೆ. ಪ್ರತಿ ವಿದ್ಯಾರ್ಥಿಗೆ ಹಾಗೂ ಪ್ರಾಧ್ಯಾಪಕರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ನೆಗೆಟಿವ್ ವರದಿ ಬಂದವರಿಗೆ ಮಾತ್ರ ತರಗತಿಗಳಿಗೆ ಅವಕಾಶ ನೀಡಲಾಗಿದೆ.
8 ತಿಂಗಳ ಬಳಿಕ ಕಾಲೇಜುಗಳು ಆರಂಭಗೊಂಡಿದ್ದರಿಂದ ಹಲವು ವಿದ್ಯಾರ್ಥಿಗಳು ತರಗತಿಗಳಿಗೆ ಆಗಮಿಸುವ ನಿರೀಕ್ಷೆಯಿತ್ತು. ಆದರೆ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯೂ ಇಲ್ಲ. ಬಾಗಲಕೋಟೆ, ಹಾಸನ ಮೊದಲಾದ ಕಡೆಗಳಲ್ಲಿ ಕೆಲ ಕಾಲೇಜಿನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಕೂಡ ಆಗಮಿಸಿಲ್ಲ. ಒಂದು ಗಂಟೆ ಕಾಲ ಕಾದ ಪ್ರಾದ್ಯಾಪಕರು ತರಗತಿಯಿಂದಲೇ ಆನ್ ಲೈನ್ ಕ್ಲಾಸ್ ಆರಂಭಿಸಿದ್ದಾರೆ. ಇನ್ನು ರಾಯಚೂರಿನ ಕಾಲೇಜೊಂದರಲ್ಲಿ ಓರ್ವ ವಿದ್ಯಾರ್ಥಿನಿಗೆ ಪ್ರಾಧ್ಯಾಪಕರು ಪಾಠ ಮಾಡುತ್ತಿರುವ ಪ್ರಸಂಗ ನಡೆದಿದೆ. ರಾಜ್ಯದ ವಿವಿಧ ಭಾಗಗಳ ಕಾಲೇಜಿನ ಸ್ಥಿತಿಯೂ ಇದೇ ಆಗಿದೆ.
ಕೋವಿಡ್ ಕಾರಣದಿಂದಾಗಿ ಹಲವೆಡೆಗಳಲ್ಲಿ ಪೋಷಕರೇ ತಮ್ಮ ಮಕ್ಕಳನ್ನು ಕಾಲೇಜುಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.