ನವದೆಹಲಿ: ಪಂಜಾಬ್ ನಲ್ಲಿ ರೈತರ ಹೋರಾಟ ಮುಂದುವರೆದಿದ್ದು 3019 ಸರಕು ರೈಲುಗಳು ರದ್ದಾಗಿರುವುದರಿಂದ ರೈಲ್ವೆಗೆ 1670 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ.
ರೈತ ವಿರೋಧಿ ಕಾಯ್ದೆ ವಿರುದ್ಧ ಪಂಜಾಬ್ ನಲ್ಲಿ ರೈತರು ಹೋರಾಟ ಮುಂದುವರಿಸಿದ್ದಾರೆ. 50 ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿರುವುದರಿಂದ ರೈಲ್ವೆ ಸರಕು ಸಾಗಣೆಯಲ್ಲಿ ವ್ಯತ್ಯಯವಾಗಿ 1670 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
1986 ಪ್ರಯಾಣಿಕರ ರೈಲು ಸೇವೆ ಮತ್ತು 3090 ಸರಕು ಸೇವೆ ರೈಲು ರದ್ದಾಗಿವೆ. ರೈತರ ಹೋರಾಟದ ಕಾರಣ ರೈಲ್ವೆ ಸೇವೆಗಳನ್ನು ರದ್ದು ಮಾಡಲಾಗಿದ್ದು, ಇದರಿಂದಾಗಿ ನಷ್ಟ ಉಂಟಾಗಿದೆ. ಪಂಜಾಬ್ ರಾಜ್ಯದ ಐದು ವಿದ್ಯುತ್ ಸ್ಥಾವರಗಳಿಗೆ 520 ರೇಕ್ ಕಲ್ಲಿದ್ದಲು ತಲುಪಿಸಲು ಸಾಧ್ಯವಾಗದ ಕಾರಣ 550 ಕೋಟಿ ರೂಪಾಯಿ ನಷ್ಟವಾಗಿದೆ.
ಅಕ್ಟೋಬರ್ 1 ರಿಂದ ನವೆಂಬರ್ 15 ರವರೆಗೆ ಅನೇಕ ರೈಲು ರದ್ದಾದ ಕಾರಣ ರೈಲ್ವೆಗೆ ಭಾರಿ ನಷ್ಟವಾಗಿದೆ. ಪಂಜಾಬ್ ಮೂಲಕ ಸಂಚರಿಸಬೇಕಿದ್ದ ಅನೇಕ ರೈಲುಗಳ ಸಂಚಾರ ಸ್ಥಗಿತವಾಗಿದೆ. ಇದರಿಂದಾಗಿ ನಿರಂತರವಾಗಿ ರೈಲ್ವೆಗೆ ನಷ್ಟವಾಗುತ್ತಿದೆ ಎಂದು ಹೇಳಲಾಗಿದೆ.
ರದ್ದಾಗಿರುವ ಸರಕು ರೈಲುಗಳಲ್ಲಿ 110 ರೇಕ್ ಸ್ಟೀಲ್(120 ಕೋಟಿ ರೂಪಾಯಿ ನಷ್ಟ), 170 ಸಿಮೆಂಟ್ ರೇಟ್(100 ಕೋಟಿ ರೂ. ನಷ್ಟ), 1150 ರೇಕ್ ಆಹಾರಧಾನ್ಯ(550 ಕೋಟಿ ರೂ. ನಷ್ಟ), 270 ರೇಕ್ ರಸಗೊಬ್ಬರ(140 ಕೋಟಿ ರೂಪಾಯಿ ನಷ್ಟ), 110 ರೇಕ್ ಪೆಟ್ರೋಲಿಯಂ ತೈಲ ಉತ್ಪನ್ನಗಳ ಸಾಗಣೆ ಆಗದೇ 40 ಕೋಟಿ ರೂ. ನಷ್ಟವಾಗಿದೆ.
ಒಂದೂವರೆ ತಿಂಗಳಿನಿಂದ(ಎರಡು ದಿನ ಹೊರತುಪಡಿಸಿ) ಪಂಜಾಬ್ ಗೆ ಗೂಡ್ಸ್ ರೈಲುಗಳು ಪ್ರವೇಶಿಸಿಲ್ಲ. ಇದರಿಂದಾಗಿ ಗೋಧಿ ಬಿತ್ತನೆಗೆ ಅಗತ್ಯವಾದ ರಸಗೊಬ್ಬರ ಮತ್ತು ಉಷ್ಣ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಸೇರಿ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಪಂಜಾಬ್ ಸರ್ಕಾರ ರೈಲು ಸೇವೆ ಆರಂಭಿಸಲು ಶೇಕಡ 100 ರಷ್ಟು ಭರವಸೆ ನೀಡಿದ ನಂತರ ಸರಕು ಸಾಗಣೆ ರೈಲು ಸೇವೆ ಆರಂಭಿಸಲಾಗುವುದು ಎಂದು ಹೇಳಲಾಗಿದೆ.