ವಾಷಿಂಗ್ಟನ್: ಅಮೇರಿಕಾದ ಬಯೋಟೆಕ್ ಸಂಸ್ಥೆ ಮಾಡೇರ್ನಾ ಸೋಮವಾರ ಕೋವಿಡ್-19 ವಿರುದ್ಧದ ಪ್ರಾಯೋಗಿಕ ಲಸಿಕೆ ಶೇಕಡ 94.5 ರಷ್ಟು ಪರಿಣಾಮಕಾರಿಯಾಗಿದೆ ಎಂದು ಘೋಷಿಸಿದೆ.
ಲಸಿಕೆಯ ಪ್ರಯೋಗದಲ್ಲಿ ಪ್ರಮುಖ ಪ್ರಗತಿ ಕಂಡು ಬಂದಿದ್ದು, ಅಮೆರಿಕದ ಔಷಧೀಯ ಕಂಪನಿ ಫೀಜರ್ ಮತ್ತು ಜರ್ಮನ್ ಪಾಲುದಾರ ಬಯೋ ಎನ್ ಟೆಕ್ ಕಳೆದ ವಾರ ಲಸಿಕೆ ಶೇಕಡ 90 ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದ ನಂತರ ಮಾಡೆರ್ನಾ ಕಂಪನಿ 30 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಪ್ರಾಯೋಗಿಕ ಪರೀಕ್ಷೆಯಿಂದ ಕಂಡು ಕೊಂಡ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು, ಶೇಕಡ 94 ಕ್ಕಿಂತ ಹೆಚ್ಚು ಪರಿಣಾಮಕಾರಿಯಾದ ಲಸಿಕೆ ಇದಾಗಿದೆ ಎಂದು ಹೇಳಿದೆ.
ಸಾಂಪ್ರದಾಯಿಕ ಲಸಿಕೆಗಳಿಗಿಂತ ಮಾನವ ಜೀವಕೋಶಗಳನ್ನು ಲಸಿಕೆ ಕಾರ್ಖಾನೆಗಳಾಗಿ ಪರಿವರ್ತಿಸುವಲ್ಲಿ ಮಾಡೆರ್ನಾ ಲಸಿಕೆ ಪರಿಣಾಮಕಾರಿಯಾಗಿದೆ. ತೀವ್ರತರ ಕಾಯಿಲೆ ಸೇರಿದಂತೆ ಕೊರೋನಾ ರೋಗವನ್ನು ತಡೆಯುತ್ತದೆ ಎನ್ನುವುದು ಅಧ್ಯಯನದಲ್ಲಿ ತಿಳಿದುಬಂದಿರುವುದಾಗಿ ಮಾಡೆರ್ನಾದ ಸಿಇಒ ಸ್ಟೀಫನ್ ಬಾನ್ಸೆಲ್ ಹೇಳಿದ್ದಾರೆ.