ಬೆಂಗಳೂರು: ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೀಗ ಲಿಂಗಾಯಿತರಿಗೂ ಮೀಸಲಾತಿ ಹಾಗೂ ಅಭಿವೃದ್ಧಿ ನಿಗಮ ಪ್ರಾಧಿಕಾರ ರಚನೆಗೆ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಿವೆ.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಪ್ರಾಧಿಕಾರ ರಚನೆಗೆ ಒತ್ತಾಯಿಸಿ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಇಂದು ಹಲವು ನಾಯಕರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಒತ್ತಡ ಹೇರಿದ್ದು, ಈ ಬಗ್ಗೆ ಸಿಎಂ ಯಡಿಯೂರಪ್ಪ ಸ್ವಲ್ಪ ಸಮಯಾವಕಾಶ ನೀಡುವಂತೆ ತಿಳಿಸಿದ್ದಾರೆ.
ಈ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಬೇಕು ಎಂಬುದು ಹಲವು ವರ್ಷಗಳಿಂದ ಸರ್ಕಾರಕ್ಕೆ ಸಲ್ಲಿಸುತ್ತಿರುವ ಬೇಡಿಕೆ. ಈ ನಿಟ್ಟಿನಲ್ಲಿ ಈಗ ಮತ್ತೆ ಮುಖ್ಯಮಂತ್ರಿಗಳಿಗೆ ನಾವು ಮನವಿ ಮಾಡಿದ್ದು, ಅವರು ಸಮಯಾವಕಾಶ ನೀಡುವಂತೆ ಕೇಳಿದ್ದಾರೆ. ಕೆಲದಿನಗಳಲ್ಲೇ ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಲು ನಿರ್ಧರಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲೇ ಕನ್ನಡಪರ ಸಂಘಟನೆಗಳು, ಲಿಂಗಾಯತ ಸಮುದಾಯ ಸೇರಿದಂತೆ ಹಲವು ಸಂಘಟನೆಗಳು ಸರ್ಕಾರದ ಕ್ರಮವನ್ನು ವಿರೋಧಿಸಿದ್ದು, ಪ್ರತಿಭಟನೆಗೆ ಮುಂದಾಗಿವೆ. ಅಲ್ಲದೇ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸಿಎಂ ಗೆ ಪತ್ರ ಬರೆದು ಲಿಂಗಾಯತ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ಘೋಷಿಸುವಂತೆ ಆಗ್ರಹಿಸಿದ್ದಾರೆ.