ಹೈದರಾಬಾದ್: ಕೃಷಿಯೇತರ ಆಸ್ತಿಗಳ ನೋಂದಣಿ ಪುನಾರಂಭಕ್ಕೆ ಕಾಯುತ್ತಿದ್ದವರಿಗೆ ನೆಮ್ಮದಿ ಸುದ್ದಿ ನೀಡಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಧರಣಿ ಪೋರ್ಟಲ್ ನಲ್ಲಿ ನವೆಂಬರ್ 23 ರಿಂದ ಕೃಷಿಯೇತರ ಆಸ್ತಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಭಾನುವಾರ ಹೈದರಾಬಾದ್ ನ ಪ್ರಗತಿ ಭವನದಲ್ಲಿ ಅಧಿಕಾರಿಗಳೊಂದಿಗೆ ಸಿಎಂ ಚಂದ್ರಶೇಖರ ರಾವ್ ಸಭೆ ನಡೆಸಿದ್ದಾರೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು. ಧರಣಿ ಪೋರ್ಟಲ್ ಮೂಲಕ ಕೃಷಿಭೂಮಿ ನೋಂದಣಿ ಪ್ರಕ್ರಿಯೆ ನಡೆಯುತ್ತಿರುವುದು ಜನಪ್ರಿಯವಾಗಿದೆ. ಅನುಕೂಲಕರವಾಗಿರುವ ಯೋಜನೆಯನ್ನು ಇನ್ನಷ್ಟು ಸುಧಾರಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಆರಂಭಿಕ ಸಮಸ್ಯೆಗಳನ್ನು ನಿವಾರಿಸಿ ನೋಂದಣಿಯನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
2020 ರ ಹೊಸ ಕಂದಾಯ ಕಾಯ್ದೆ ಜಾರಿಗೆ ಬರುವ ಮೊದಲು ಸೆಪ್ಟೆಂಬರ್ 8 ರಂದು ಆಸ್ತಿಗಳ ನೋಂದಣಿ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಆಸ್ತಿ ನೋಂದಣಿಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಅಕ್ಟೋಬರ್ 29 ರಂದು ಧರಣಿ ಪೋರ್ಟಲ್ ಆರಂಭಿಸಲಾಗಿದೆ.
ಇದರೊಂದಿಗೆ ಕೃಷಿ ಆಸ್ತಿಗಳ ನೋಂದಣಿ ಪುನಾರಂಭವಾಗಿದೆ. ಕೃಷಿಯೇತರ ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪೋರ್ಟಲ್ ಗೆ ಅಪ್ಲೋಡ್ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಸ್ಥಗಿತಗೊಂಡಿತ್ತು. ಇದಕ್ಕೆ ನವೆಂಬರ್ 23 ರಿಂದ ಚಾಲನೆ ಸಿಗಲಿದ್ದು, ಕೃಷಿಯೇತರ ಆಸ್ತಿ ನೋಂದಣಿ ಕಾರ್ಯ ಧರಣಿ ಪೋರ್ಟಲ್ ನಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.