ಬೆಂಗಳೂರು: ಆಪ್ತ ಸ್ನೇಹಿತ ಅಥವಾ ಸ್ನೇಹಿತೆ ಎಂದು ನಮ್ಮ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಈ ಸ್ಟೋರಿಯನ್ನು ಓದಲೇಬೇಕು……ಆಪ್ತ ಸ್ನೇಹಿತೆಯ ಹಳೇ ಲವ್ ಸ್ಟೋರಿ ಬಗ್ಗೆ ತಿಳಿದುಕೊಂಡಿದ್ದ ಮಹಿಳೆಯೊಬ್ಬಳು, ಅದನ್ನೇ ಬಂಡವಾಳ ಮಾಡಿಕೊಂಡು ಗೆಳತಿಗೆ ಬೆದರಿಕೆ ಹಾಕಿ ಕೋಟ್ಯಂತರ ರೂಪಾಯಿ ವಂಚಿರುವ ಘಟನೆ ಬೆಳಕಿಗೆ ಬಂದಿದೆ.
ಅನು ಅಲಿಯಾಸ್ ಅಪರ್ಣಾ ಎಂಬಾಕೆ ತನ್ನ ಆಪ್ತ ಸ್ನೇಹಿತೆಯ ಹಳೇ ಪ್ರೇಮದ ವಿಚಾರ ತಿಳಿದು, ಆಕೆಯ ಹಳೇ ಬಾಯ್ ಫ್ರೆಂಡ್ ಹೆಸರಲ್ಲಿ ಚಾಟಿಂಗ್ ಮಾಡಿದ್ದಾಳೆ. ಅಲ್ಲದೇ ಒಂದು ಲಕ್ಷ ಹಣವನ್ನು ಅಪರ್ಣಾ ಎಂಬುವವರ ಅಕೌಂಟ್ ಗೆ ಹಾಕಬೇಕು. ಇಲ್ಲವಾದಲ್ಲಿ ನಿನ್ನ ಹಾಗೂ ನಿನ್ನ ಬಾಯ್ ಫ್ರೆಂಡ್ ನ ಖಾಸಗಿ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ, ನಿನ್ನ ಸಂಸಾರವನ್ನು ಹಾಳು ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ.
ಗಾಬರಿಗೊಂಡ ಸಂತ್ರಸ್ತೆ ಹಣ ನೀಡಲು ಒಪ್ಪಿಕೊಂಡಿದ್ದಾಳೆ. ಆರೋಪಿ ಮಹಿಳೆ ಹೇಳಿದಂತೆ ಅಪರ್ಣಾ ಎಂಬುವವರ ಅಕೌಂಟಿಗೆ ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿದ್ದಾರೆ. ಹಣದ ರುಚಿ ನೋಡಿದ ಖತರ್ನಾಕ್ ಲೇಡಿ ಮತ್ತೆ ಮತ್ತೆ ಬೆದರಿಕೆಯೊಡ್ಡಲು ಆರಂಭಿಸಿದ್ದಾಳೆ. ನಿನ್ನ ಕುಟುಂಬದವರಿಗೆ, ಗಂಡನಿಗೆ ಫೋಟೋ ಕಳಿಸುವುದಾಗಿ ಹೆದರಿಸಿದ್ದಾಳೆ. ಇನ್ನಷ್ಟು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾಳೆ. ನಿರಂತರ ಬ್ಲ್ಯಾಕ್ ಮೇಲ್ ಗೆ ಭಯಗೊಂಡ ಸಂತ್ರಸ್ತೆ ಬರೋಬ್ಬರಿ 1ಕೋಟಿ 25 ಸಾವಿರ ರೂ. ಹಣ ನೀಡಿದ್ದಾರೆ.
ಅಂತಿಮವಾಗಿ ಸಂತ್ರಸ್ತ ಮಹಿಳೆ ವೈಟ್ ಫೀಲ್ಡ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗೆ ಬಲೆ ಬೀಸಿದಾಗ ಸಂತ್ರಸ್ತ ಮಹಿಳೆಯ ಆಪ್ತ ಸ್ನೇಹಿತೆಯೇ ಮಾಡಿರುವ ವಂಚನೆ ಬಯಲಾಗಿದೆ. ಇದೀಗ ಆರೋಪಿ ಅನು ಅಲಿಯಾಸ್ ಅಪರ್ಣಾ ಎಂಬಾಕೆಯನ್ನು ಬಂಧಿಸಲಾಗಿದೆ.