ತಿರುವನಂತಪುರಂ: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇಂದಿನಿಂದ ಅಯ್ಯಪ್ಪನ ದರ್ಶನ ಆರಂಭವಾಗಲಿದೆ.
ಇಂದು ಸಂಜೆ ಗರ್ಭಗುಡಿಯ ದ್ವಾರವನ್ನು ತೆರೆಯಲಾಗುತ್ತದೆ. ಹಿರಿಯ ಅರ್ಚಕ ಸುಧೀರ್ ನಂಬೂದರಿ ಅವರು ದೇವರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ನಂತರ ದರ್ಶನ ಆರಂಭವಾಗಲಿದೆ. ಇವತ್ತು ಸ್ಥಳೀಯರು ಮತ್ತು ದೇವಾಲಯದ ಸಿಬ್ಬಂದಿಗೆ ದರ್ಶನಕ್ಕೆ ಅವಕಾಶವಿದ್ದು ನಾಳೆಯಿಂದ ಯಾತ್ರಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ವರ್ಚುಯಲ್ ಕ್ಯೂ ವ್ಯವಸ್ಥೆ ಮಾಡಲಾಗಿದೆ. ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ದರ್ಶನಕ್ಕೆ ಅವಕಾಶ ಇರುತ್ತದೆ. ಕೇರಳ ಸರ್ಕಾರದಿಂದ ನೀಳಕ್ಕಲ್ ಮತ್ತು ಪಂಪಾದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ತೆರೆಯಲಾಗಿದೆ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಹೇಳಲಾಗಿದೆ.