ಜೈಸಲ್ಮೇರ್: ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷದಂತೆ ಈ ಬಾರಿಯೂ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದು, ಜೈಸಲ್ಮೇರ್ ಗಡಿಯಲ್ಲಿ ಸೈನಿಕರೊಂದಿಗೆ ಬೆಳಕಿನ ಹಬ್ಬ ಆಚರಿಸಿ, ದೇಶದ ಜನರ ಪರವಾಗಿ ಯೋಧರಿಗೆ ಹಬ್ಬದ ಶುಭಾಷಯ ಕೋರಿದರು.
ಜೈಸಲ್ಮೇರ್ ಗಡಿಯಲ್ಲಿ ಯೋಧರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಸೇವೆಯಲ್ಲಿ ತೊಡಗಿರುವ ಯೋಧರಿಗೆ ಅಭಿನಂದನೆಗಳು. ಮರಭೂಮಿಯಲ್ಲಿರಿ, ಹಿಮವತ್ ಪ್ರದೇಶದಲ್ಲೇ ಇರಿ. ನಿಮ್ಮೊಂದಿಗೆ ಸೇರಿ ದೀಪಾವಳಿ ಹಬ್ಬ ಆಚರಿಸಿದೆರೆ ಅದಕ್ಕೊಂದು ಸಂಭ್ರಮ. ನಿಮ್ಮ ಮುಖದಲ್ಲಿ ಸಂತಸ ನೋಡಿದಾಗ ನನ್ನ ಸಂತಸ ದ್ವಿಗುಣವಾಗುತ್ತೆ. ಇಡೀ ದೇಶದ ಜನತೆ ನಿಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಲೋಂಗೆವಾಲಾ ಕದನವನ್ನು ಸ್ಮರಿಸಿದ ಪ್ರಧಾನಿ, ಲೋಂಗೆವಾಲಾ ಗಡಿಯಲ್ಲಿ ಪಾಕ್ ಗೆ ತಕ್ಕ ಪಾಠ ಕಲಿಸಿದೆವು. ಲೋಂಗೆವಾಲ ಹೋರಾಟಕ್ಕೆ 2021ಕ್ಕೆ 50 ವರ್ಷ. ನಿಮ್ಮ ಸಹೊದ್ಯೋಗೊಗಳು ಅಂತಹ ಹೋರಾಟ ಮಾಡಿದ್ದಾರೆ. ವಿಶ್ವದ ಯಾವುದೇ ಶಕ್ತಿ ನಮ್ಮ ಯೋಧರನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಸೇನೆಯ ಮುಂದೆ ಯಾರಿಗೂ ನಿಲ್ಲುವ ಶಕ್ತಿಯೂ ಇಲ್ಲ ಎಂದರು.
ಇನ್ನು ಆತ್ಮನಿರ್ಭರ ಭಾರತ ಅಭಿಯಾನದಡಿ ರಕ್ಷಣಾ ವಲಯದಲ್ಲಿ ಸ್ವಾಲಂಬನೆ ಸಾಧಿಸಲು ಹೆಜ್ಜೆ ಇಡಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಮಿಲಿಟರಿ ಉತ್ಪನ್ನ ದೇಶದಲ್ಲೇ ಉತ್ಪಾದಿಸುವ ಗುರಿ ಹೊಂದಲಾಗುತ್ತಿದೆ ಎಂದು ತಿಳಿಸಿದರು.