ಬೀಜಿಂಗ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡೆನ್ ಅವರಿಗೆ ಚೀನಾ ಕೊನೆಗೂ ಅಭಿನಂದನೆ ಸಲ್ಲಿಸಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ ಬಿನ್, ಈ ಹಿಂದೆ ಬೈಡನ್ ಅವರನ್ನು ಅಭಿನಂದಿಸಲು ನಿರಾಕರಿಸಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಅಮೆರಿಕದ ಕಾನೂನುಗಳು ಮತ್ತು ಕಾರ್ಯವಿಧಾನಗಳಿಂದ ನಿರ್ಧರಿಸಬೇಕು. ಈ ಪ್ರಕ್ರಿಯೆ ಡಿಸೆಂಬರ್ ನಲ್ಲಿ ನಡೆಯಲಿರುವುದರಿಂದ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಭಿನಂದನೆ ಸಲ್ಲಿಸುವುದಾಗಿ ರಷ್ಯಾ ಮತ್ತು ಚೀನಾ ಹೇಳಿದ್ದವು.
ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಚೀನಾ ಅಭಿನಂದಿಸಿದ್ದು, ಅಮೆರಿಕ ಜನರ ಆಯ್ಕೆಯನ್ನು ಗೌರವಿಸುವುದಾಗಿ ಹೇಳಲಾಗಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ ಬಿನ್ ಅವರು ಅಮೆರಿಕ ಜನರ ಆಯ್ಕೆಯನ್ನು ಗೌರವಿಸಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.