ನವದೆಹಲಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ರೋಜ್ಗಾರ್ ಯೋಜನೆ ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೂರನೇ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡಿದ್ದಾರೆ.
ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಆದಾಯ ತೆರಿಗೆ ನಿಯಮಗಳನ್ನು ಸಡಿಲಗೊಳಿಸಿದೆ. ಮನೆ ಖರೀದಿಗೆ ತೆರಿಗೆ ರಿಯಾಯಿತಿ ನೀಡಲಾಗಿದೆ. ಹೊಸ ಮನೆಗಳನ್ನು ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ದರಕ್ಕಿಂತ ಶೇಕಡ 10 ರಷ್ಟು ಕಡಿಮೆ ದರಕ್ಕೆ ಮಾತ್ರ ಖರೀದಿಸಲು ಇದುವರೆಗೆ ಅವಕಾಶ ಇತ್ತು. ಅದರ ಮಿತಿಯನ್ನು ಶೇಕಡ 20 ಕ್ಕೆ ಏರಿಕೆ ಮಾಡಲಾಗಿದೆ. ಈ ನಿಯಮದಿಂದ ಮನೆ ಖರೀದಿಸುವವರು ಮತ್ತು ಮನೆಗಳನ್ನು ನಿರ್ಮಿಸಿ ಮಾರಾಟ ಮಾಡುವ ಡೆವಲಪರ್ಸ್ ಗಳಿಗೆ ಅನುಕೂಲವಾಗುತ್ತದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಗೆ 18,000 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಲಾಗಿದ್ದು, ಇದರಿಂದ 12 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಆರಂಭ ಮತ್ತು 18 ಲಕ್ಷ ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಅನುಕೂಲವಾಗಲಿದೆ ಎನ್ನಲಾಗಿದೆ.