![](https://kannadadunia.com/wp-content/uploads/2020/04/currency_2000_022720030610_040920080256.jpg)
ನವದೆಹಲಿ: ಆರ್ಥಿಕ ಚೇತರಿಕೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮ ನಿರ್ಭರ್ ಭಾರತ 3.0 ಪ್ಯಾಕೇಜ್ ನಲ್ಲಿ ಉತ್ತೇಜನಕಾರಿ ಕ್ರಮಗಳನ್ನು ಘೋಷಿಸಿದ್ದಾರೆ.
ರೈತರಿಗೆ ರಾಸಾಯನಿಕ ಗೊಬ್ಬರ ಹೆಚ್ಚುವರಿ ಸಬ್ಸಿಡಿ ಘೋಷಿಸಲಾಗಿದೆ. ರಸಗೊಬ್ಬರ ಪೂರೈಕೆಯ ಕೊರತೆಯನ್ನು ತಪ್ಪಿಸಿ ಅಗತ್ಯ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ 65 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ಘೋಷಿಸಿದ್ದು ಇದಕ್ಕೆ ಹೆಚ್ಚುವರಿಯಾಗಿ 10 ಸಾವಿರ ಕೋಟಿ ರೂಪಾಯಿ ನೀಡಲಾಗುವುದು.
ಗ್ರಾಮೀಣ ಆರ್ಥಿಕತೆಯ ಹೆಚ್ಚಳದ ಉದ್ದೇಶದಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಯೋಜನೆಗೆ ಹೆಚ್ಚುವರಿಯಾಗಿ 10 ಸಾವಿರ ಕೋಟಿ ರೂಪಾಯಿ ನೀಡಲಾಗುವುದು. ಉದ್ಯೋಗ ಖಾತ್ರಿ ಯೋಜನೆಗೆ 73,504 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಪ್ರಧಾನಮಂತ್ರಿ ರೋಜ್ಗಾರ್ ಯೋಜನೆ 116 ಜಿಲ್ಲೆಗಳಲ್ಲಿ ಪ್ರಗತಿಯಲ್ಲಿದೆ. ಇದಕ್ಕಾಗಿ 57,543 ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ.
ಇನ್ನು ಸಣ್ಣ ಮತ್ತು ಮಧ್ಯಮ ಉದ್ಯಮಗಳ ನೆರವಿಗೆ ಖಾತರಿಯ ತುರ್ತು ಸಾಲ ಯೋಜನೆಯನ್ನು 2021 ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ವಾರ್ಷಿಕ 250 ಕೋಟಿ ರೂಪಾಯಿ ವ್ಯವಹಾರ, 50 ಕೋಟಿ ರೂಪಾಯಿವರೆಗೂ ಸಾಲ ಇರುವವರಿಗೆ ಶೇಕಡ 20 ರಷ್ಟು ಹೆಚ್ಚುವರಿ ಸಾಲ ನೀಡಲಾಗುವುದು. ಮುದ್ರಾ ಯೋಜನೆಯ ಸಾಲಗಾರರು, ಎಂಎಸ್ಎಂಇ, ವ್ಯಾಪಾರೋದ್ಯಮಿಗಳು ಖಾತರಿಯ ತುರ್ತು ಸಾಲ ಪ್ರಯೋಜನ ಪಡೆಯಬಹುದಾಗಿದೆ.