ನವದೆಹಲಿ: ಭವಿಷ್ಯ ನಿಧಿ ಸಂಸ್ಥೆ(EPFO) ನೋಂದಾಯಿತ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರುವವರೆಗೆ ತಿಂಗಳಿಗೆ 15 ಸಾವಿರ ರೂಪಾಯಿಗಿಂತ ಕಡಿಮೆ ಮಾಸಿಕ ವೇತನವಿದ್ದರೆ ಕೇಂದ್ರ ಸರ್ಕಾರದ ಹೊಸ ಆರ್ಥಿಕ ಪ್ಯಾಕೇಜ್ ನಲ್ಲಿ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ವರ್ಷ ಮಾರ್ಚ್ 1 ರಿಂದ ಸೆಪ್ಟಂಬರ್ 30 ರವರೆಗೆ ಕೆಲಸ ಕಳೆದುಕೊಂಡವರು ಅಥವಾ ಅಕ್ಟೋಬರ್ 1 ರಂದು ಮತ್ತು ನಂತರದಲ್ಲಿ ಉದ್ಯೋಗಕ್ಕೆ ಸೇರಿದವರಿಗೆ ಯೋಜನೆಯಿಂದ ಲಾಭ ಸಿಗಲಿದೆ.
ಕೇಂದ್ರ ಸರ್ಕಾರ ಆರ್ಥಿಕತೆ ಸುಧಾರಿಸಲು ಗುರುವಾರ ಘೋಷಿಸಿರುವ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ನಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೋಜನೆ ಬಗ್ಗೆ ಮಾಹಿತಿ ನೀಡಿ, ತಿಂಗಳಿಗೆ 15 ಸಾವಿರ ರೂಪಾಯಿ ಗಳಿಸುವ, 1000 ಉದ್ಯೋಗಿಗಳನ್ನು ಹೊಂದಿರುವ EPFO ನೋಂದಾಯಿತ ಸಂಸ್ಥೆಗಳಿಗೆ ಶೇಕಡ 12 ರಷ್ಟು ನೌಕರರ ಕೊಡುಗೆ ಮತ್ತು ಕೇಂದ್ರ ಸರ್ಕಾರದಿಂದ ಶೇಕಡ 12 ರಷ್ಟು ಉದ್ಯೋಗದಾತರ ವಂತಿಗೆ ಸ್ವೀಕರಿಸಲಾಗುವುದು ಎಂದು ಹೇಳಿದ್ದಾರೆ.
ಯೋಜನೆಯಡಿ ಎರಡು ವರ್ಷಗಳ ಅವಧಿಗೆ ಶೇಕಡ 24 ರಷ್ಟು ವೇತನ ನೀಡುತ್ತದೆ. 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರಿಗೆ ಕೇಂದ್ರ ಸರ್ಕಾರದಿಂದ ಶೇಕಡ 12 ರಷ್ಟು ನೌಕರರ ಇಪಿಎಫ್ ಕೊಡುಗೆ ಸಿಗಲಿದೆ. ಉದ್ಯೋಗಿಯ ಇಪಿಎಫ್ ಖಾತೆಗೆ ಮೊತ್ತ ಜಮಾ ಮಾಡಲಾಗುತ್ತದೆ ಎಂದು ಹೇಳಲಾಗಿದೆ.