ಮಾಸ್ಕೋ: ಕೊರೋನಾ ತಡೆಗೆ ರಷ್ಯಾ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ‘ಸ್ಪುಟ್ನಿಕ್ 5’ ಲಸಿಕೆ ಶೇಕಡ 92 ರಷ್ಟು ಯಶಸ್ವಿಯಾಗಿದೆ. ಕೊರೋನಾ ಸೋಂಕಿನಿಂದ ರಕ್ಷಣೆ ಪಡಯಲು ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ.
ಲಸಿಕೆ ಪ್ರಯೋಗದ ಹಂತದಲ್ಲಿದ್ದು, ಪ್ರಯೋಗದ ಮಧ್ಯಂತರ ರಿಪೋರ್ಟ್ ಗಳು ಇದನ್ನು ದೃಢಪಡಿಸಿವೆ. ಅಮೆರಿಕದ ಫೈಜರ್ ಕಂಪೆನಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಶೇಕಡ 90 ರಷ್ಟು ಪರಿಣಾಮಕಾರಿಯಾಗಿದೆ ಎಂದು ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ರಷ್ಯಾ ಮಾಹಿತಿ ನೀಡಿ, ‘ಸ್ಪುಟ್ನಿಕ್ 5’ ಲಸಿಕೆ ಶೇಕಡ 92 ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.
ಆಗಸ್ಟ್ ನಲ್ಲೇ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ನೀಡಲು ನೋಂದಣಿ ಮಾಡಿಕೊಂಡಿದ್ದ ರಷ್ಯಾ 16 ಸಾವಿರ ಮಂದಿಯ ಮೇಲೆ ಲಸಿಕೆ ಪ್ರಯೋಗಿಸಿದೆ. ಮೂರನೇ ಹಂತದಲ್ಲಿ 40 ಸಾವಿರ ಮಂದಿಯ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದೆ. 21 ದಿನಗಳ ಅಂತರದಲ್ಲಿ ಸ್ಪುಟ್ನಿಕ್ 5 ಲಸಿಕೆ ನೀಡಲಾಗುತ್ತಿದ್ದು ಯಶಸ್ವಿಯಾಗಿದೆ ಎನ್ನುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.