ನವದೆಹಲಿ: ದೀಪಾವಳಿ ಕೊಡುಗೆಯಾಗಿ ಬ್ಯಾಂಕ್ ಸಿಬ್ಬಂದಿಗೆ ಶೇಕಡ 15 ರಷ್ಟು ವೇತನ ಹೆಚ್ಚಳದ ಸಿಹಿ ಸುದ್ದಿ ಸಿಕ್ಕಿದೆ. ಭಾರತೀಯ ಬ್ಯಾಂಕುಗಳ ಒಕ್ಕೂಟ ಮತ್ತು ಬ್ಯಾಂಕಿಂಗ್ ಯೂನಿಯನ್ಸ್ ನಡುವೆ ದ್ವಿಪಕ್ಷೀಯ ಒಪ್ಪಂದವಾಗಿದ್ದು, ಶೇಕಡ 15 ರಷ್ಟು ವೇತನ ಹೆಚ್ಚಳಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ.
2022 ರ ಅಕ್ಟೋಬರ್ ವರೆಗೆ ಈ ಒಪ್ಪಂದ ಜಾರಿಯಲ್ಲಿ ಇರುತ್ತದೆ. ವೇತನಕ್ಕಾಗಿ ಮಾಡುವ ವೆಚ್ಚದಲ್ಲಿ 7,900 ಕೋಟಿ ರೂಪಾಯಿ ಏರಿಕೆಯಾಗಲಿದೆ. 3385 ಕೋಟಿ ರೂಪಾಯಿ ಅಧಿಕಾರೇತರ ಮತ್ತು ಉಳಿದ ಹಣ ಅಧಿಕಾರಿಗಳಿಗೆ ವೇತನ ರೂಪದಲ್ಲಿ ಸಿಗಲಿದೆ.
ಪರಿಷ್ಕೃತ ವೇತನ ಮತ್ತು ಅರಿಯರ್ಸ್ ಇದೇ ತಿಂಗಳು ಸಿಬ್ಬಂದಿಗೆ ನೀಡಲಾಗುವುದು. ನವೆಂಬರ್ ತಿಂಗಳ ವೇತನದಲ್ಲಿ ಹೆಚ್ಚಳ ಮೊತ್ತ ಸಿಗಲಿದೆ ಎಂದು ಅಧಿಕಾರಿಗಳ ಒಕ್ಕೂಟ ಹೇಳಿದ್ದರೂ, ಬ್ಯಾಂಕುಗಳ ವತಿಯಿಂದ ಇನ್ನೂ ಖಚಿತ ಮಾಹಿತಿ ನೀಡಲಾಗಿಲ್ಲ. 12 ಸರ್ಕಾರಿ, 10 ಖಾಸಗಿ ಮತ್ತು 7 ವಿದೇಶಿ ಬ್ಯಾಂಕುಗಳ 5 ಲಕ್ಷ ಸಿಬ್ಬಂದಿಗೆ ವೇತನ ಹೆಚ್ಚಳ ಆಗಲಿದೆ. ಇದೇ ಮೊದಲ ಸಲ ಸಮಾನ ಬೇಸಿಕ್, ಡಿಎ, ಹೆಚ್.ಆರ್.ಎ., ವಿಶೇಷ ಭತ್ಯೆ, ಸಾರಿಗೆ ಭತ್ಯೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.