ಮುಂಬೈ: ನಾಯಿಯನ್ನು, ಎಮ್ಮೆಯನ್ನು, ಆನೆಯನ್ನು ಸರಪಳಿ ಹಾಕಿ ಕಟ್ಟುವುದು ನೋಡಿದ್ದೇವೆ. ಇನ್ನು ಕೆಲವರು ಸೈಕಲ್, ಬೈಕ್, ಚಪ್ಪಲಿಗಳನ್ನೂ ಕಟ್ಟುವುದೂ ಇರಬಹುದು. ಆದರೆ, ಐಶಾರಾಮಿ ಕಾರನ್ನೇ ಮರಕ್ಕೆ ಬಂಧಿಸಿದ ಅಪರೂಪದ ಫೋಟೋವೊಂದು ನೆಟ್ಟಿಗರ ಗಮನ ಸೆಳೆದಿದೆ.
ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ ಮಹೀಂದ್ರಾ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ನೇರಳೆ ಬಣ್ಣದ ಮಹೀಂದ್ರಾ ಎಸ್.ಯು.ವಿ. ಕಾರನ್ನು ಸರಪಳಿ ಹಾಕಿ ಕಟ್ಟಿ ಬೀಗ ಹಾಕಿಡಲಾಗಿದೆ. ಈ ಫೋಟೋವನ್ನು 8 ಸಾವಿರ ಜನ ಲೈಕ್ ಮಾಡಿದ್ದಾರೆ. ಮಹೀಂದ್ರಾ ಸ್ಕಾರ್ಪಿಯೋ ಅಧಿಕೃತ ಖಾತೆಯಲ್ಲೂ ಇದನ್ನು ರೀ ಟ್ವೀಟ್ ಮಾಡಲಾಗಿದೆ.
“ಇದು ನಿಖರವಾಗಿ ಹೈಟೆಕ್ ಲಾಕಿಂಗ್ ವ್ಯವಸ್ಥೆಯಂತೂ ಅಲ್ಲ. ಆದರೆ, ಇದು ಮಾಲೀಕನ ಪೊಸೆಸಿವ್ ನೆಸ್(ಸ್ವಾಮ್ಯ ಸೂಚಕತೆ)ನ್ನು ತೋರಿಸುತ್ತದೆ. ನಾನು ಲಾಕ್ ಡೌನ್ ನಲ್ಲಿ ಹೇಗಿದ್ದೆ ಎಂಬುದನ್ನು ಈ ಚಿತ್ರ ಸರಿಯಾಗಿ ಹೇಳಿದೆ. ಈ ವೀಕೆಂಡ್ ನಲ್ಲಿ ನಾನು ನನ್ನ ಮಾಸ್ಕ್ ನೊಂದಿಗೆ ಸರಪಳಿಯನ್ನು ತುಂಡು ಮಾಡಿದೆ” ಎಂದು ಆನಂದ ಮಹೀಂದ್ರಾ ಬರೆದಿದ್ದಾರೆ.
“ಮಾಲೀಕ ಕಾರನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದನ್ನು ಈ ಫೋಟೋ ತೋರಿಸುತ್ತದೆ” ಎಂದು ಒಬ್ಬರು ಕಮೆಂಟಿಸಿದ್ದಾರೆ. “ಇದು ಕಾರೋ ಅಥವಾ ದನವೋ..?” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. “ನಿಜವಾದ ಭಾರತೀಯ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.