ಬೆಂಗಳೂರು: ನವೆಂಬರ್ 17 ರಿಂದ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಪೋಷಕರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ನಂತರ ಕಾಲೇಜಿಗೆ ಹಾಜರಾಗಬೇಕಿದ್ದು, ತರಗತಿಗಳಿಗೆ ಹಾಜರಾಗದವರಿಗೆ ಆನ್ಲೈನ್ ಕ್ಲಾಸ್ ನಡೆಸಲಾಗುವುದು. ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಕಾಲೇಜಿಗೆ ಹಾಜರಾಗುವ ಮೂರು ದಿನ ಮೊದಲು ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ಹೇಳಲಾಗಿದೆ.
ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕಿದ್ದು, ನೆಗೆಟಿವ್ ವರದಿ ಬಂದರೆ ಮಾತ್ರ ಕಾಲೇಜಿಗೆ ಬರಬೇಕು. ಕೊಠಡಿ, ಪೀಠೋಪಕರಣ, ಪಠ್ಯ ಸಾಮಗ್ರಿ, ಸ್ಯಾನಿಟೈಸ್ ಮಾಡಬೇಕು. ಕಾಲೇಜುಗಳ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಮ್ಯಾಪಿಂಗ್ ಮಾಡಿಕೊಳ್ಳಬೇಕು.
ಮನೆಯಿಂದಲೇ ಊಟ, ಕುಡಿಯುವ ನೀರು ತರಬೇಕು. ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್, ಫೇಸ್ ಶೀಲ್ಡ್ ಧರಿಸಬೇಕು. ಕಾಲೇಜುಗಳಲ್ಲಿ ಲೈಬ್ರರಿ, ಕ್ಯಾಂಟೀನ್ ತೆರೆಯುವಂತಿಲ್ಲ. ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಎನ್.ಸಿ.ಸಿ., ಎನ್ಎಸ್ಎಸ್ ಚಟುವಟಿಕೆ ಪ್ರಾರಂಭಿಸುವಂತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.