ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಡೆನ್ ಗೆಲುವಿನ ಸುದ್ದಿ ವಿಶ್ಲೇಷಿಸುವಾಗ ಸಿಎನ್ಎನ್ ಸುದ್ದಿವಾಹಿನಿಯ ನಿರೂಪಕ ವ್ಯಾನ್ ಜೋನ್ಸ್ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಸ್ವತಃ ಸಿಎನ್ಎನ್ ವಾಹಿನಿ ಆ ಸನ್ನಿವೇಶದ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ವಿಡಿಯೋ ಸಾಕಷ್ಟು ವೈರಲ್ ಆಗಿದೆ.
‘ಇಂದು ಶುಭ ದಿನ. ಅಮೆರಿಕಾ ಮರು ನಿರ್ಮಾಣವಾಗುವ ಕಾಲ ಬಂದಿದೆ. ಅಮೆರಿಕಾದ ನಾಗರಿಕರು ಸ್ವಲ್ಪ ಶಾಂತಿ ಪಡೆದಿದ್ದಾರೆ. ಒಬ್ಬರ ಜೀವನ ಸಂಗಾತಿಯಾಗುವುದು. ಮಗುವಿನ ತಂದೆಯಾಗುವುದು, ನಡತೆಯ ವಿಷಯವನ್ನು ಮಕ್ಕಳಿಗೆ ಹೇಳುವುದು, ಸತ್ಯ ಹೇಳುವುದು ಇನ್ನು ಸುಲಭ’ ಎಂದು ಜೋನ್ಸ್ ಕಣ್ಣೊರೆಸಿಕೊಳ್ಳುತ್ತ ಟಿವಿ ಲೈವ್ನಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
‘ಎಲ್ಲ ಮುಸ್ಲಿಂ ಜನರಿಗೆ ಇದು ಖುಷಿಯ ಸಂದೇಶ. ನೀವು ಇನ್ನು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ವಲಸಿಗರು ಆತಂಕಪಡುವ ಅವಶ್ಯಕತೆ ಇಲ್ಲ. ಈಗಿನ ಅಧ್ಯಕ್ಷರು ನಿಮ್ಮನ್ನು ವಾಪಸ್ ಕಳಿಸುವುದಿಲ್ಲ. ಟ್ರಂಪ್ ಅವರಿಂದ ತೊಂದರೆಗೀಡಾದ ಸಾಕಷ್ಟು ಜನರಿಗೆ ಇದೊಂದು ಸಂತಸದ ಕ್ಷಣ. ನಾನು ಉಸಿರಾಡಲು ತೊಂದರೆ ಉಂಟಾಗುತ್ತಿತ್ತು’ ಎಂದು ಹೇಳಿದ್ದಾರೆ.