ನಾಲ್ಕು ವರ್ಷಗಳ ಹಿಂದೆ ನವೆಂಬರ್ 8, ಮಂಗಳವಾರ 2016 ರಲ್ಲಿ ಪ್ರಧಾನಿ ಮೋದಿ ಮಹತ್ವದ ನಿರ್ಧಾರ ಪ್ರಕಟಿಸಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಘೋಷಣೆ ಮಾಡಿದ್ದರು.
ಏಕಾಏಕಿ ಜಾರಿಗೆ ತಂದ ನಿಯಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗಿತ್ತು. ಜನಸಾಮಾನ್ಯರು ತತ್ತರಿಸಿದ್ದರು. ನೋಟ್ ಬ್ಯಾನ್ ಆರಂಭದ ದಿನಗಳಲ್ಲಿ ಕರೆನ್ಸಿ ಕೊರತೆ, ಚಿಲ್ಲರೆ ಸಮಸ್ಯೆ ತೀವ್ರತರವಾಗಿ ಕಾಡಿತ್ತು. ನಂತರ ಹಂತ, ಹಂತವಾಗಿ ಪರಿಸ್ಥಿತಿ ಸುಧಾರಿಸಿತ್ತು.
ಡಿಮಾನಿಟೈಸೇಷನ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರಾಗಿದ್ದ ಭವಾನಿ ಸಿಂಗ್ ರಾಜಾವತ್ ಮಾತನಾಡಿದ್ದ ವಿಡಿಯೋ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ನೋಟ್ ಬ್ಯಾನ್ ಯೋಜಿತವಲ್ಲದ ಕಾರ್ಯಕ್ರಮವಾಗಿದೆ. ಹಂತಹಂತವಾಗಿ ಕರೆನ್ಸಿ ನಿಷೇಧವನ್ನು ಜಾರಿಗೆ ತರಬಹುದಾಗಿತ್ತು ಎಂದು ಅವರು ಹೇಳಿದ್ದಾರೆ. ಡಿಮಾನಿಟೈಸೇಷನ್ ಸಂದರ್ಭದಲ್ಲಿನ ವಿಡಿಯೋದಲ್ಲಿ ಭವಾನಿ ಸಿಂಗ್ ರಾಜಾವತ್ ಅವರು ಆಫ್ ದಿ ರೆಕಾರ್ಡ್ ಸಂಭಾಷಣೆಯಲ್ಲಿ ಮಾತನಾಡಿದ್ದ ವಿಡಿಯೋ ಈಗ ಮತ್ತೆ ಹರಿದಾಡತೊಡಗಿದೆ.
500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಡಿಮಾನಿಟೈಸೇಷನ್ ಮಾಡಿದ ಸಂದರ್ಭದಲ್ಲಿ ಕೇಂದ್ರದ ಸರ್ಕಾರದ ಆಡಳಿತದೊಂದಿಗೆ ಹತ್ತಿರವಾಗಿದ್ದ ಅಂಬಾನಿ ಮತ್ತು ಆದಾನಿ ಅಂತವರಿಗೆ ನೋಟ್ ಬ್ಯಾನ್ ಮಾಡುವ ವಿಚಾರ ಮೊದಲೇ ತಿಳಿದಿತ್ತು ಎಂದು ಹೇಳಿದ್ದರು.
ರಾಜಸ್ಥಾನದ ಕೋಟ ಬಿಜೆಪಿ ಶಾಸಕರಾಗಿದ್ದ ಭವಾನಿ ಸಿಂಗ್, ವಿಡಿಯೋದಲ್ಲಿ ಅಂಬಾನಿ, ಅದಾನಿಯಂತಹವರಿಗೆ ನೋಟ್ ಬ್ಯಾನ್ ಬಗ್ಗೆ ಮೊದಲೇ ಸುಳಿವು ನೀಡಲಾಗಿತ್ತು. ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ನೋಟ್ ಬ್ಯಾನ್ ಬಳಿಕ ಅಗತ್ಯಕ್ಕೆ ಅನುಗುಣವಾಗಿ ಹೊಸ ಕರೆನ್ಸಿ ಮುದ್ರಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದರು.
ಕರೆನ್ಸಿ ನಿಷೇಧ ಯೋಜಿತವಲ್ಲದ ಕಾರ್ಯಕ್ರಮವಾಗಿತ್ತು. ಅದನ್ನು ಹಂತಹಂತವಾಗಿ ಕಾರ್ಯಗತಗೊಳಿಸಬಹುದಾಗಿತ್ತು ಎಂದು ಹೇಳಿದ್ದಾರೆ. ಅಂದ ಹಾಗೆ, ಭವಾನಿ ಸಿಂಗ್ ಈ ರೀತಿ ವಿವಾದಿತ ಹೇಳಿಕೆ ನೀಡುವುದು ಇದೇ ಮೊದಲೇನಲ್ಲ. ಬಿಹಾರಿ ವಿದ್ಯಾರ್ಥಿಗಳು ಮತ್ತು ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಓಡಾಡುವ ವಿಚಾರದಲ್ಲಿ ಅವರು ವಿವಾದಿತ ಹೇಳಿಕೆ ನೀಡಿದ್ದರು.