ಹಾಸನ: ರಾಜ್ಯದಲ್ಲಿನ ಸರ್ಕಾರಿ ನೌಕರರ ವಿಮಾ ಪಾಲಿಸಿಗಳ ಗಣಕೀಕರಣ ಪ್ರಕ್ರಿಯೆ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದ್ದಾರೆ.
ಹಾಸನದ ಗುರುಭವನದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿ, 15 ಲಕ್ಷ ಪಾಲಿಸಿಗಳ ಗಣಕೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಇದು ಪೂರ್ಣಗೊಂಡ ನಂತರ ಸಾಲ, ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಸಾಲ ಪಡೆಯಲು ಸರ್ಕಾರಿ ನೌಕರರ ವಿಮಾ ಇಲಾಖೆ – ಕೆಜಿಐಡಿಗೆ ನೌಕರರು ಅಲೆಯಬೇಕಿತ್ತು. ಗಣಕೀಕರಣ ಪ್ರಕ್ರಿಯೆ ನಡೆಯುತ್ತಿರುವುದರಿಂದ 10 ದಿನದಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಮೃತ ನೌಕರರ ಅಂತ್ಯಸಂಸ್ಕಾರಕ್ಕೆ ನೀಡುತ್ತಿದ್ದ ಹಣವನ್ನು 5 ರಿಂದ 15 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಕ್ಯಾನ್ಸರ್ ಮತ್ತು ಡಯಾಲಿಸಿಸ್ ರೋಗಿಗಳಿಗೆ ವೇತನ ಸಹಿತ ವಿಶೇಷ ಸಾಂದರ್ಭಿಕ ರಜೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ್ ಮಾತನಾಡಿ. ಹೊಸ ಎನ್.ಪಿ.ಎಸ್. ಪದ್ಧತಿ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕಿದೆ ಎಂದು ಹೇಳಿದ್ದಾರೆ.