73ನೇ ವಿಶ್ವ ಆರೋಗ್ಯ ಅಸೆಂಬ್ಲಿ ಅಧಿವೇಶನದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿಗೆ ಮೂರು ನಿರ್ಣಾಯಕ ಸಂದೇಶವನ್ನ ಸಾರಿದೆ. ವಿಜ್ಞಾನ, ಪರಿಹಾರ ಹಾಗೂ ಒಗ್ಗಟ್ಟಿನಿಂದ ಕೊರೊನಾ ವೈರಸ್ನ್ನು ಸೋಲಿಸಬಹುದು ಎಂದು ಹೇಳಿದೆ.
ಇದೊಂದು ಜಾಗತಿಕ ಬಿಕ್ಕಟ್ಟಾಗಿದ್ದರೂ ಸಹ ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ ಪ್ರಸರಣವನ್ನ ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. ಕೊರೊನಾ ವಿರುದ್ಧದ ಲಸಿಕೆ ಅನ್ವೇಷಣೆಗಾಗಿ ವಿಶ್ವದ ಎಲ್ಲ ರಾಷ್ಟ್ರಗಳು ಇದೇ ಮೊದಲ ಬಾರಿಗೆ ಒಟ್ಟುಗೂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆದರೆ ಇದರ ಜೊತೆಯಲ್ಲಿ ಮುಂದಿನ ಸಾಂಕ್ರಾಮಿಕ ರೋಗಕ್ಕೆ ಇಡೀ ಜಗತ್ತು ಈಗಿನಿಂದಲೇ ಸಿದ್ಧವಾಗಬೇಕು ಅಂತಾ ಎಚ್ಚರಿಕೆ ಸಂದೇಶವನ್ನೂ ರವಾನಿಸಿದೆ. ತುರ್ತು ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಕರಡನ್ನ ವಿಶ್ವ ಆರೋಗ್ಯ ಸಂಸ್ಥೆ ತಯಾರಿಸಲಿದ್ದು ಇದು ಸಾಂಕ್ರಾಮಿಕ ಕಾಯಿಲೆ ಪತ್ತೆ ಹಾಗೂ ಪರಿಹಾರಕ್ಕೆ ಪೂರಕವಾಗಿರಲಿದೆ. ಅಲ್ಲದೇ ನಿರ್ಣಾಯಕ ಆರೋಗ್ಯ ಗುರಿಗಳ ವಿಚಾರದಲ್ಲಿ ಜಗತ್ತಿನ ಯಾವುದೇ ರಾಷ್ಟ್ರಗಳು ಹಿಂದೆ ಸರಿಯಬೇಡಿ ಎಂದು ಎಚ್ಚರಿಸಿದೆ.
ಕೊರೊನಾ ವೈರಸ್ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿರತೆಗೆ ಮನುಷ್ಯನ ಆರೋಗ್ಯವೇ ಅಡಿಪಾಯ ಎಂಬುದನ್ನ ಜ್ಞಾಪಿಸಿದೆ. ಅಲ್ಲದೇ ಡಬ್ಲೂಹೆಚ್ಓನ ‘ಟ್ರಿಪಲ್ ಬಿಲಿಯನ್ ಗುರಿ’ಯ ಮಹತ್ವ ಏನೆಂಬುದನ್ನೂ ಕೋವಿಡ್ ತೋರಿಸಿಕೊಟ್ಟಿದೆ ಅಂತಾ ಹೇಳಿದೆ.