ಚಿಕ್ಕಬಳ್ಳಾಪುರ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ 7 ಮಂದಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
7 ಮಂದಿ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರನ್ನು 6 ವರ್ಷ ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನದಿಂದ ಉಚ್ಚಾಟಿಸಲಾಗಿದೆ. ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಎಸ್.ಎಂ. ರಫೀಕ್, ಅಫ್ಜಲ್, ಎನ್.ಎಸ್. ಚಂದ್ರಶೇಖರ್, ಮೀನಾಕ್ಷಿ ವಿಪ್ ಉಲ್ಲಂಘಿಸಿ ಮತ ಚಲಾವಣೆ ಮಾಡಿದ್ದಾರೆ. ರತ್ನಮ್ಮ, ಶಕೀಲಾ ಬಾನು, ಸ್ವಾತಿ ಚುನಾವಣೆಗೆ ಗೈರುಹಾಜರಾಗಿದ್ದಾರೆ.
31 ಸದಸ್ಯರನ್ನು ಹೊಂದಿರುವ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 16 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದರೂ, ಅಧಿಕಾರಕ್ಕೇರುವಲ್ಲಿ ವಿಫಲವಾಗಿದೆ. ಸಚಿವ ಸುಧಾಕರ್ ಬೆಂಬಲಿಗ, ಪಕ್ಷೇತರ ಸದಸ್ಯ ಆನಂದ್ ರೆಡ್ಡಿ 22 ಮತಗಳನ್ನು ಪಡೆದು ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಕ್ಷದ ಸದಸ್ಯರು ಅಭ್ಯರ್ಥಿ ವಿರುದ್ಧವಾಗಿ ಮತ ಚಲಾಯಿಸಿದ್ದರಿಂದ ಕಾಂಗ್ರೆಸ್ ಗೆ ಮುಖಭಂಗವಾಗಿದೆ. ಈ ಹಿನ್ನೆಲೆಯಲ್ಲಿ 7 ಮಂದಿ ಕಾಂಗ್ರೆಸ್ ಸದಸ್ಯರನ್ನು 6 ವರ್ಷಗಳ ಕಾಲ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಮಹಮ್ಮದ್ ಉಚ್ಛಾಟಿಸಿದ್ದಾರೆ.