
ಬೆಂಗಳೂರು: ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಪ್ರಾಂತೀಯ ಕಚೇರಿಯನ್ನು ವರ್ಚುವಲ್ ಮೂಲಕ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನೌಷಧಿ ಕೇಂದ್ರಗಳಲ್ಲಿ ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಆಯುರ್ವೇದಿಕ್ ಔಷಧ ನೀಡಲಾಗುವುದು ಎಂದು ಹೇಳಿದ್ದಾರೆ.
ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಗಳನ್ನು ಜನೌಷಧಿ ಕೇಂದ್ರಗಳ ಮೂಲಕ ಕೇಂದ್ರ ಸರ್ಕಾರ ಜನತೆಗೆ ತಲುಪಿಸುತ್ತಿದೆ. ಶೇಕಡ 10 ರಿಂದ ಶೇಕಡ 90 ರಷ್ಟು ರಿಯಾಯಿತಿ ದರದಲ್ಲಿ ಗುಣಮಟ್ಟದ ಔಷಧಗಳು ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಆಯುರ್ವೇದಿಕ್ ಔಷಧ ನೀಡಲಾಗುವುದು ಎಂದು ಹೇಳಿದ್ದಾರೆ.
ಜನರಿಕ್ ಮೆಡಿಸನ್ ಆಪ್ ಮೂಲಕ ಎಲ್ಲಿ ಜನೌಷಧ ಮಳಿಗೆ ಇವೆ ಎಂಬ ಮಾಹಿತಿ ಪಡೆಯಬಹುದು. ಬೇಕಾದ ಔಷಧದ ಹೆಸರು ಟೈಪ್ ಮಾಡುವ ಮೂಲಕ ಅದೇ ರೀತಿಯ ಬೇರೆ ಯಾವ ಔಷಧ ಮಳಿಗೆಯಲ್ಲಿದೆ ಎಂಬುದು ಗೊತ್ತಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಜನೌಷಧಿಗಳನ್ನೇ ಬರೆಯುವಂತೆ ಸೂಚನೆ ನೀಡಲಾಗಿದ್ದು, ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಸದಾನಂದಗೌಡ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಸಹಕಾರ ಇಲಾಖೆಯ ಮೂಲಕ ಕೇಂದ್ರ ಸರ್ಕಾರದ ಜನೌಷಧ ಸೇರಿ ಹಲವು ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.