ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷದ ಪರ ಪ್ರಚಾರ ಮಾಡುವುದಾಗಲಿ ಅಥವಾ ತಮ್ಮ ಕುಟುಂಬದವರು ಬೇರೆ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಅವರ ಪರ ಪ್ರಚಾರಕ್ಕೆ ಹೋಗುವುದಾಗಲಿ ಮಾಡಿದ್ದಲ್ಲಿ ಅಂತಹ ರಾಜಕಾರಣಿಗಳಿಗೆ ಅಮಾನತು ಶಿಕ್ಷೆ ಇದ್ದೇ ಇದೆ. ಇದೀಗ ಈ ಶಿಕ್ಷೆಗೆ ಒಳಪಟ್ಟಿರೋದು ಜೆಡಿಯು ಪಕ್ಷದ ವಿಧಾನ ಪರಿಷತ್ ಸದಸ್ಯ.
ಹೌದು, ಬಿಹಾರ ವಿಧಾನಸಭಾ ಚುನಾವಣೆಯ ರಂಗು ಜೋರಾಗಿದೆ. ಇಲ್ಲಿನ ಮುಝಫ್ಫರ‍್ಪುರ ಜಿಲ್ಲೆಯ ಗಾಯ್‌ಘಾಟ್ ಕ್ಷೇತ್ರದಿಂದ ಲೋಕಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ದಿನೇಶ್ ಕುಮಾರ್ ಸಿಂಗ್ ಅವರ ಪುತ್ರಿ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಮಗಳ ಪರ ವಿಧಾನ ಪರಿಷತ್ ಸದಸ್ಯ ದಿನೇಶ್ ಕುಮಾರ್ ಸಿಂಗ್ ಪ್ರಚಾರಕ್ಕಿಳಿದಿದ್ದರು.
ಇವರು ಮಾಡಿದ್ದು ಪಕ್ಷ ದ್ರೋಹ ಚಟುವಟಿಕೆ ಎಂದು ನಿರ್ಧರಿಸಿ ಸಿಂಗ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ಹಾಗೂ ಶೋಕಾಸ್ ನೋಟಿಸ್ ನೀಡಿ ಉತ್ತರ ನೀಡುವಂತೆ ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಆರ್ಯ ಸೂಚಿಸಿದ್ದಾರೆ. ಇನ್ನು ದಿನೇಶ್ ಕುಮಾರ್ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಜೆಡಿಯು ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಮೇಲೆ ಮಗಳ ಪರ ಪ್ರಚಾರ ಮಾಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.