ಬೆಂಗಳೂರು: ರಾಜ್ಯದಲ್ಲಿ ಪಡಿತರ ಅಕ್ರಮದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸರ್ಕಾರ ಚಿಂತನೆ ನಡೆಸಿದೆ. ಆಹಾರ ಧಾನ್ಯ ಅಕ್ರಮ ದಾಸ್ತಾನು, ಪಡಿತರ ಹಂಚಿಕೆಯಲ್ಲಿ ಅಕ್ರಮ ಮತ್ತು ದುರ್ಬಳಕೆ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ.
ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡುದಾರರು, ಅಂತ್ಯೋದಯ ಕಾರ್ಡ್ ದಾರರಿಂದ ಆಹಾರಧಾನ್ಯ ವಿತರಿಸಲು ಹಣ ವಸೂಲಿ ಮಾಡಲಾಗುವುದು, ನಿಗದಿತ ಪ್ರಮಾಣಕ್ಕಿಂತ ಕಡಿಮೆ ಆಹಾರ ಧಾನ್ಯ ವಿತರಿಸಲಾಗುವುದು, ಆಹಾರ ಧಾನ್ಯಗಳ ಜೊತೆಗೆ ಬೇರೆ ವಸ್ತುಗಳನ್ನು ಮಾರಾಟ ಮಾಡಲಾಗುವುದು ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದೆ.
ಅಕ್ರಮ ಎಸಗಿದ ನ್ಯಾಯಬೆಲೆ ಅಂಗಡಿಯವರ ವಿರುದ್ಧ ದಂಡ ವಿಧಿಸಿ ತಾತ್ಕಾಲಿಕವಾಗಿ ಪರವಾನಿಗೆ ರದ್ದು ಮಾಡಲಾಗುತ್ತಿತ್ತು. ಹೀಗಿದ್ದರೂ ಕೆಲವು ನ್ಯಾಯಬೆಲೆ ಅಂಗಡಿ ಮಾಲೀಕರು ಹಳೇ ಚಾಳಿ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಚಿಂತನೆ ನಡೆಸಿದ್ದು, ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಲಾಗಿದೆ.