ಬೆಂಗಳೂರು: ಶಾಲೆಗಳ ಆರಂಭದ ಕುರಿತಾಗಿ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಚೈಲ್ಡ್ ರೈಟ್ಸ್ ಟ್ರಸ್ಟ್ ನಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದು, 500 ಪೋಷಕರ ಪೈಕಿ 350 ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಶಾಲೆ ಆರಂಭಿಸಲು ಪೋಷಕರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ವ್ಯಾಕ್ಸಿನ್ ಬಂದ ನಂತರ ಶಾಲೆ ಆರಂಭಿಸುವಂತೆ ಅಭಿಪ್ರಾಯ ತಿಳಿಸಿದ್ದಾರೆ. ಪೋಷಕರ ಅಭಿಪ್ರಾಯ ಸಂಗ್ರಹದ ಬಳಿಕ ಚೈಲ್ಡ್ ರೈಟ್ಸ್ ಟ್ರಸ್ಟ್ ನಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಶಾಲೆ ಆರಂಭ ಮಾಡದಿದ್ದರೆ ಬಾಲ್ಯವಿವಾಹ ಹೆಚ್ಚಾಗುತ್ತದೆ. ಇದರ ಜೊತೆಗೆ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತವೆ. ಕೂಲಿ ಕಾರ್ಮಿಕರು ಹೆಚ್ಚಾಗುತ್ತಾರೆ ಎಂದು ವರದಿ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ ಮೊದಲು ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ ಬಳಿಕ ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿ ಪೋಷಕರಲ್ಲಿ ನಂಬಿಕೆ ಮೂಡಿಸಬೇಕೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶಾಲೆ ಆರಂಭವಾಗುತ್ತಿದ್ದಂತೆ ಪಾಠಗಳನ್ನು ಆರಂಭಿಸಬೇಡಿ. ಮಕ್ಕಳು ಶಾಲೆಗೆ ಹೊಂದಿಕೊಂಡ ನಂತರ ಪಾಠ ಆರಂಭಿಸಿ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.