ಅಕ್ರಮ ಸಿಗರೇಟು ಮಾರಾಟದಿಂದ ದೇಶದ ಬೊಕ್ಕಸಕ್ಕೆ ವಾರ್ಷಿಕ 13,000 ಕೋಟಿ ರೂ.ಗಳಷ್ಟು ನಷ್ಟವಾಗುತ್ತಿದೆ ಎಂದು ಭಾರತೀಯ ತಂಬಾಕು ಸಂಸ್ಥೆ (ಟಿಐಐ) ವರದಿ ಮಾಡಿದೆ.
2005ರಲ್ಲಿ 12.5 ಶತಕೋಟಿಯಷ್ಟಿದ್ದ ಅಕ್ರಮ ಸಿಗರೇಟುಗಳ ಮಾರಾಟವು 2018ರ ವೇಳೆಗೆ 26.5 ಶತಕೋಟಿಯಷ್ಟಕ್ಕೆ ಏರಿಕೆ ಕಂಡಿದೆ ಎಂದು ವರದಿ ತಿಳಿಸುತ್ತಿದೆ. ಸಿಗರೇಟಿನ ಮೇಲೆ ವಿಪರೀತ ಹೆಚ್ಚಿನ ತೆರಿಗೆ ಇರುವ ಕಾರಣ ಅಕ್ರಮ ಮಾರಾಟ ಹೆಚ್ಚುತ್ತಲೇ ಇದೆ ಎಂದು ತಿಳಿದುಬಂದಿದೆ. ಅದರಲ್ಲೂ ಕೊರೋನಾ ಲಾಕ್ಡೌನ್ ವೇಳೆಯಲ್ಲಿ ಈ ಅಕ್ರಮ ವಹಿವಾಟು ಇನ್ನಷ್ಟು ಹೆಚ್ಚಿದೆ.
ಜುಲೈ 2017ರಲ್ಲಿ ಪರಿಚಯಿಸಿದ ಜಿಎಸ್ಟಿಯಲ್ಲಿ ಸಿಗರೇಟುಗಳ ಮೇಲೆ ತೆರಿಗೆ & ಸೆಸ್ ಹೆಚ್ಚಿಸಲಾಗಿದೆ. ಜಿಎಸ್ಟಿ ಪೂರ್ವ ತೆರಿಗೆಗಿಂತ 13% ಹೆಚ್ಚು ತೆರಿಗೆಯನ್ನು ಸಿಗರೇಟಿನ ಮೇಲೆ ವಿಧಿಸಲಾಗಿದೆ.
ಜಗತ್ತಿನ ಎರಡನೇ ಅತಿ ದೊಡ್ಡ ತಂಬಾಕು ಉತ್ಪಾದಕ ದೇಶವಾದ ಭಾರತ, ತಂಬಾಕು ರಫ್ತಿನಿಂದಲೇ 45.7 ದಶಲಕ್ಷ ಮಂದಿಗೆ ಉದ್ಯೋಗ ಕೊಟ್ಟಿದೆ. ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯಿಂದಲೇ ಸರ್ಕಾರಗಳಿಗೆ ಪ್ರತಿ ವರ್ಷ 43,000 ಕೋಟಿ ರೂ.ಗಳು ಸಂಗ್ರಹವಾಗುತ್ತಿದೆ ಎಂದು ವರದಿ ಬೆಳಕು ಚೆಲ್ಲಿದೆ.