ಭೂ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಶಸ್ತ್ರ ಪಡೆಯಲ್ಲಿ ಮಹತ್ವದ ಸುಧಾರಣೆ ತರಲು ಮುಂದಾಗಿದ್ದಾರೆ. ರಕ್ಷಣಾ ಪಡೆಯಲ್ಲಿ ಮಾನವ ಶಕ್ತಿಯನ್ನ ಹೆಚ್ಚು ಮಾಡಲು ತಾಂತ್ರಿಕ ಶಾಖೆಗಳ ಅಧಿಕಾರಿಗಳು ಹಾಗೂ ಜವಾನರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಉದ್ದೇಶಿಸಿದ್ದಾರೆ. ಹಾಗೂ ಅಕಾಲಿಕ ನಿವೃತ್ತಿ ಪಡೆಯುವ ಜವಾನರ ಪಿಂಚಣಿ ಹಣವನ್ನ ಕಡಿಮೆ ಮಾಡುವ ವಿಚಾರವನ್ನ ಪ್ರಸ್ತಾಪಿಸಿದ್ದಾರೆ.
ಕರ್ನಲ್ಗಳ ನಿವೃತ್ತಿಯ ವಯಸ್ಸನ್ನ 54 ರಿಂದ 57ಕ್ಕೆ ಹಾಗೂ ಬ್ರಿಗೇಡಿಯರ್ಗಳ ನಿವೃತ್ತಿ ವಯಸ್ಸು 56ರಿಂದ 58ಕ್ಕೆ ಹಾಗೂ ಮೇಜರ್ ಜನರಲ್ಗಳ ನಿವೃತ್ತಿ ವಯಸ್ಸನ್ನ 58ರಿಂದ 59ಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ. ಲೆಫ್ಟಿನೆಂಟ್ ಜನರಲ್ಗಳ ನಿವೃತ್ತಿ ವಯಸ್ಸು 60 ಇದ್ದು ಈ ವಯಸ್ಸನ್ನ ಪರಿಷ್ಕರಣೆ ಮಾಡಲಾಗಿಲ್ಲ.
ಲಾಜಿಸ್ಟಿಕ್ಸ್, ತಾಂತ್ರಿಕ ಮತ್ತು ವೈದ್ಯಕೀಯ ಶಾಖೆಯಲ್ಲಿ ಕಿರಿಯ ನಿಯೋಜಿತ ಅಧಿಕಾರಿಗಳು ಮತ್ತು ಜವಾನರಿಗೆ ನಿವೃತ್ತಿ ವಯಸ್ಸನ್ನು 57 ವರ್ಷಗಳಿಗೆ ಹೆಚ್ಚಿಸಲಾಗಿದೆ ಮತ್ತು ಇದರಲ್ಲಿ ಭಾರತೀಯ ಸೇನೆಯ ಇಎಂಇ, ಎಎಸ್ಸಿ ಮತ್ತು ಎಒಸಿ ಶಾಖೆಗಳೂ ಸೇರಿವೆ.
ಅಕಾಲಿಕ ನಿವೃತ್ತಿಯನ್ನು ತೆಗೆದುಕೊಳ್ಳುವ ಸಿಬ್ಬಂದಿಗೆ ಪಿಂಚಣಿಯಲ್ಲಿನ ಪ್ರಸ್ತಾವಿತ ಪರಿಷ್ಕರಣೆಯ ಪ್ರಕಾರ, 20-25 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದುವ ಪುರುಷರು ಶೇಕಡಾ 50 ರಷ್ಟು ಅರ್ಹ ಪಿಂಚಣಿ ಪಡೆಯುತ್ತಾರೆ ಮತ್ತು 25-30 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದುವವರಿಗೆ ಇದು ಶೇಕಡಾ 60 ರಷ್ಟಾಗುತ್ತದೆ. 35 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದುವವರು ತಮ್ಮ ಪೂರ್ಣ ಪಿಂಚಣಿಗೆ ಅರ್ಹರಾಗಿರುತ್ತಾರೆ.