ನವದೆಹಲಿ: ಕೋರೋನಾ ಲಸಿಕೆಯ ನಿರೀಕ್ಷೆಯಲ್ಲಿದ್ದ ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. 2022 ರ ವರೆಗೆ ಸಾಮಾನ್ಯ ಜನರಿಗೆ ಲಸಿಕೆ ಲಭ್ಯವಿರುವುದಿಲ್ಲ. ಕೊರೋನಾ ಲಸಿಕೆ ಬಂದ ನಂತರವೂ ಸಾಮಾನ್ಯ ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ನಿಯಮಗಳನ್ನು ಪಾಲಿಸಬೇಕಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳು ಗಮನಾರ್ಹ ರೀತಿಯಲ್ಲಿ ಕುಸಿತ ಕಂಡಿದ್ದರೂ ಕೂಡ, ಚೇತರಿಕೆ ಪ್ರಮಾಣ ಹೆಚ್ಚಾಗಿದ್ದರೂ ಕೂಡ ದೆಹಲಿಯಂತಹ ಮಹಾನಗರಗಳು, ದೇಶದ ಕೆಲವು ಭಾಗದಲ್ಲಿ ಸೋಂಕಿನ ಆತಂಕ ಹೆಚ್ಚಾಗಿದೆ.
ಕೋವಿಡ್-19 ನಿರ್ವಹಣೆಯ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯ ಮತ್ತು ಏಮ್ಸ್ ನಿರ್ದೇಶಕರಾಗಿರುವ ಡಾ. ರಂದೀಪ್ ಗುಲೇರಿಯಾ ಅವರು ಸಂದರ್ಶನವೊಂದರಲ್ಲಿ, ದೇಶದಲ್ಲಿನ ಸಾಂಕ್ರಾಮಿಕ ರೋಗಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೋವಿಡ್ ಸ್ಥಿತಿಗತಿಗಳ ಬಗ್ಗೆ ಮಾತನಾಡಿರುವ ಅವರು, ಜನಸಂದಣಿ, ರಾಜಕೀಯ ಸಮಾವೇಶ, ಸಭೆ, ಸಮಾರಂಭ ಮೊದಲಾದ ಕಾರಣಗಳಿಂದ ಕೊರೋನಾ ಹೆಚ್ಚಾಗುವ ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ನಿಯಮ ಪಾಲಿಸದಿದ್ದರೆ, ಕೊರೋನಾ ಹೆಚ್ಚಾಗುವ ಆತಂಕವಿದೆ ಎಂದು ಹೇಳಿದ್ದಾರೆ.
2022 ರ ವರೆಗೆ ಸಾಮಾನ್ಯ ಜನರಿಗೆ ಲಸಿಕೆ ಲಭ್ಯವಿರುವುದಿಲ್ಲ ಎಂಬ ಮಾಹಿತಿಯನ್ನು ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ. ಲಸಿಕೆ ಸುಮಾರು ಶೇಕಡ 50 ರಷ್ಟು ಪರಿಣಾಮಕಾರಿಯಾಗಿರುತ್ತದೆ. ಸಾಂಕ್ರಾಮಿಕ ರೋಗ ಕೊನೆಯಾಗುವವರೆಗೆ ನಿಯಮಗಳನ್ನು ಪಾಲಿಸಬೇಕಿದೆ. ವ್ಯಾಕ್ಸಿನ್ ಬಂದ ಕೂಡಲೇ ಮ್ಯಾಜಿಕ್ ಮಾಡಿ ಕೊರೋನಾ ಕಣ್ಮರೆಯಾಗುವುದಿಲ್ಲ. ಲಸಿಕೆ ಹರಡುವ ಸರಪಳಿಯನ್ನು ಮುರಿಯಲು ಅದು ಸಹಾಯ ಮಾಡುತ್ತದೆ. ಕಡಿಮೆ ಸಂಖ್ಯೆಯ ಜನ ಸೋಂಕಿಗೆ ಒಳಗಾಗಬಹುದು. ಆದರೆ ಶೂನ್ಯಕ್ಕೆ ಇಳಿಯುವುದಿಲ್ಲ.
ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳಲ್ಲಿ ಲಸಿಕೆ ಸಮಾನ ಹಂಚಿಕೆ ದೊಡ್ಡ ಸವಾಲಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಬಗ್ಗೆ ಮಾತನಾಡಿದೆ. ಸಾಮಾನ್ಯ ಜನರು ಲಸಿಕೆ ಪಡೆಯಲು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು. ಕಾರಣ ಭಾರತ ಹೆಚ್ಚಿನ ಜನಸಂಖ್ಯೆ ಹೊಂದಿದ ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.