ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದ ಸೆಕ್ಟರ್ ಡೆಲ್ಟಾ 1 ರಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೂ ಮೊದಲು ವಿಡಿಯೋದಲ್ಲಿ ತನ್ನ ಸಂಕಷ್ಟ ಹೇಳಿಕೊಂಡಿದ್ದಾನೆ. ಇದನ್ನು ಆಧರಿಸಿ ಮೃತನ ಪತ್ನಿಯ ವಿರುದ್ಧ ವ್ಯಕ್ತಿಯ ಕುಟುಂಬದವರು ದೂರು ನೀಡಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ವ್ಯಕ್ತಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 2019 ರಲ್ಲಿ ಸಿಂಗಂ ವಿಹಾರ್ ನಿವಾಸಿಯಾಗಿದ್ದ ಯುವತಿಯೊಂದಿಗೆ ಆತನ ಮದುವೆ ನೆರವೇರಿತ್ತು. ದಂಪತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಆತ ನೊಂದುಕೊಂಡಿದ್ದ. ವಿಚ್ಛೇದನ ನೀಡಲು ಮುಂದಾದರೆ 60 ಲಕ್ಷ ರೂಪಾಯಿ ಕೊಡಬೇಕೆಂದು ಪತ್ನಿ ಮತ್ತು ಆಕೆಯ ಕುಟುಂಬದವರು ಬೆದರಿಕೆ ಹಾಕಿದ್ದರು. ಪತ್ನಿ ಮದುವೆಗೂ ಮೊದಲು ಬೇರೆ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದಿದ್ದರೂ ಆಕೆಯ ಕುಟುಂಬದವರು ಮದುವೆ ಮಾಡಿದ್ದರು.
ಮೊದಲ ರಾತ್ರಿಯಂದೇ ತನ್ನ ಪ್ರೀತಿಯ ಬಗ್ಗೆ ಪತ್ನಿ ಗಂಡನಿಗೆ ತಿಳಿಸಿದ್ದು, ಮುಂದಿನ ಜೀವನದ ಕಾರಣಕ್ಕೆ ತನ್ನ ಮನೆಯವರಿಗೆ ಪತ್ನಿ ಮದುವೆಗೂ ಮೊದಲು ಪ್ರೀತಿಸಿದ್ದ ವಿಷಯವನ್ನು ಹೇಳಿಕೊಂಡಿರಲಿಲ್ಲ. ಪದೇ ಪದೇ ಜಗಳವಾಡುತ್ತಿದ್ದ ಪತ್ನಿ ಮತ್ತು ಆಕೆಯ ಮನೆಯವರ ಕಾಟದಿಂದ ಬೇಸತ್ತ ವ್ಯಕ್ತಿ ಅಕ್ಟೋಬರ್ 19 ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮೊದಲು ವಿಡಿಯೋದಲ್ಲಿ ಇದೆಲ್ಲವನ್ನು ತಿಳಿಸಿದ್ದು ಆತನ ವಿಡಿಯೋ ದೊರೆತ ನಂತರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರೇಟರ್ ನೋಯ್ಡಾ ಸೆಂಟ್ರಲ್ ಡಿಸಿಪಿ ಹರೀಶ್ ಚಂದರ್ ಈ ಬಗ್ಗೆ ಮಾಹಿತಿ ನೀಡಿ, ಅಕ್ಟೋಬರ್ 26 ರಂದು ಸೂರಜ್ ಪುರ ಪೊಲೀಸ್ ಠಾಣೆಗೆ ಮೃತನ ಪತ್ನಿ ವಿರುದ್ಧ ಕುಟುಂಬದವರು ನೀಡಿರುವುದಾಗಿ ತಿಳಿಸಿದ್ದಾರೆ.