ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರಿಗೆ ಬಿಜೆಪಿಯಿಂದ ಬೆದರಿಕೆ ಹಾಕಲಾಗಿದೆ. ‘ಆರ್.ಆರ್.ಆರ್.’ ಸಿನಿಮಾವನ್ನು ಬಿಡುಗಡೆ ಮಾಡಿದಲ್ಲಿ ಥಿಯೇಟರ್ ಗೆ ಬೆಂಕಿ ಹಚ್ಚುವುದಾಗಿ ಬಿಜೆಪಿ ಮುಖಂಡರು ಹೇಳಿದ್ದಾರೆ.
ಬಹುನಿರೀಕ್ಷೆಯ ರಾಮಚರಣ್, ಜೂನಿಯರ್ ಎನ್ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ ಮೊದಲಾದ ಘಟಾನುಘಟಿ ಕಲಾವಿದರು ಅಭಿನಯಿಸಿರುವ ‘ಆರ್.ಆರ್.ಆರ್.’ಸಿನಿಮಾ ಬಿಡುಗಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಕೋಮರಂ ಭೀಮರಾವ್ ಪಾತ್ರವನ್ನು ಜೂನಿಯರ್ ಎನ್ಟಿಆರ್ ನಿರ್ವಹಿಸಿದ್ದಾರೆ. ಇದರಲ್ಲಿ ಅವರನ್ನು ಮುಸ್ಲಿಂ ವ್ಯಕ್ತಿಯ ರೀತಿ ಬಿಂಬಿಸಲಾಗಿದೆ ಎನ್ನುವುದೇ ವಿವಾದಕ್ಕೆ ಕಾರಣವಾಗಿದೆ.
ಬುಡಕಟ್ಟು ಜನರ ಪರವಾಗಿ ಹೋರಾಟ ನಡೆಸಿದ್ದ ಭೀಮರಾವ್ ಅವರನ್ನು ಅಲ್ಪಸಂಖ್ಯಾತ ವ್ಯಕ್ತಿಯ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಹೈದರಾಬಾದ್ ವಿಮೋಚನೆಗಾಗಿ ಭೀಮರಾವ್ ಹೋರಾಟ ನಡೆಸಿದ್ದರು. ನಿಜಾಮರ ವಿರುದ್ಧ ಹೋರಾಟ ನಡೆಸಿದ ಅವರನ್ನು ಮುಸ್ಲಿಮರ ರೀತಿ ಚಿತ್ರಿಸಲಾಗಿದೆ. ಬೇಕಿದ್ದರೆ ರಾಜಮೌಳಿ ಮುಸ್ಲಿಂ ನಾಯಕ ಓವೈಸಿ ಅವರನ್ನು ಹಾಕಿಕೊಂಡು ಹೈದರಾಬಾದ್ ನಲ್ಲಿ ಸಿನಿಮಾ ಮಾಡಲಿ. ಭೀಮರಾವ್ ಅವರನ್ನು ಈ ರೀತಿ ತಪ್ಪಾಗಿ ಬಿಂಬಿಸಬಾರದು ಎಂದು ಹೇಳಲಾಗಿದೆ.
ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು, ರಾಜಮೌಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ತಂದರೆ ಸುಮ್ಮನೆ ಕೂರುವುದಿಲ್ಲ. ಸಿನಿಮಾ ಬಿಡುಗಡೆಯಾದ ದಿನ ಥಿಯೇಟರ್ ಗಳಿಗೆ ಬೆಂಕಿ ಹಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.