ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ 10 ಕೋಟಿಯಲ್ಲಿ ಮೈಸೂರು ಜಿಲ್ಲಾಡಳಿತ 2,91,83,167 ರೂ. ಖರ್ಚು ಮಾಡಿದ್ದು, 7.8 ಕೋಟಿ ರೂ. ಉಳಿತಾಯ ಮಾಡಿದೆ.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಮೈಸೂರು ದಸರಾ ಆಚರಣೆ ಮಾಡಲಾಗಿದ್ದು, ದಸರಾ ಖರ್ಚು ವೆಚ್ಚಗಳ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಲೆಕ್ಕ ನೀಡಿದ್ದಾರೆ. ಮೈಸೂರು ದಸರಾಗೆ ರಾಜ್ಯ ಸರ್ಕಾರ 10 ಕೋಟಿ ಬಿಡುಗಡೆ ಮಾಡಿತ್ತು. ಇದರಲ್ಲಿ 2.5 ಕೋಟಿ ಖರ್ಚಾಗಿದ್ದು, 7.8 ಕೋಟಿ ಉಳಿತಾಯವಾಗಿದೆ ಎಂದರು.
ಮೈಸೂರು ದಸರಾಗೆ 23 ವಿಭಾಗಗಳಿಗೆ ಜಿಲ್ಲಾಡಳಿತ ಖರ್ಚು ಮಾಡಿದ್ದು, 2,05,83,167 ರೂಪಾಯಿ. ಸಾಂಸ್ಕೃತಿಕ ಕಾರ್ಯಕ್ರಮದ ಕಲಾವಿದರಿಗೆ 44 ಲಕ್ಷ, ದಸರಾ ಆನೆಗಳ ನಿರ್ವಹಣೆಗೆ 35 ಲಕ್ಷ, 2 ವೇದಿಕೆಗೆ 41 ಲಕ್ಷ ಹಾಗೂ ರಾಜವಂಶಸ್ಥರ ಗೌರವ ಧನವಾಗಿ 40 ಲಕ್ಷ ರೂ. ಖರ್ಚಾಗಿದೆ. ಇನ್ನು ಶ್ರೀರಂಗಪಟ್ಟಣ ದಸರಾಗೆ 50 ಲಕ್ಷ ಹಾಗೂ ಚಾಮರಾಜನಗರ ದಸರಾಗೆ 36 ಲಕ್ಷ ಸೇರಿ ಒಟ್ಟು 2,91,83,167 ರೂ. ಹಣ ಖರ್ಚಾಗಿದೆ ಎಂದು ವಿವರಿಸಿದರು.