ಬೆಂಗಳೂರು: ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಶೇಷವಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ನಾರಿಯರು ಇಳಕಲ್ ಸೀರೆಯುಟ್ಟು, ಮೈಸೂರು ಪೇಟ ಧರಿಸಿ ಭರ್ಜರಿ ಬೈಕ್ ರ್ಯಾಲಿ ನಡೆಸಿ ಗಮನ ಸೆಳೆದರು.
ವಿಧಾನಸೌಧದ ಮುಂಭಾಗದಿಂದ ಆರಂಭವಾದ ಮಹಿಳೆಯರ ಬೈಕ್ ರ್ಯಾಲಿ ಎಂ.ಜಿ.ರಸ್ತೆಯ ಮ್ಯೂಸಿಯಂ ವರೆಗೆ ನಡೆಯಿತು. ಮಹಿಳೆಯರು ಇಳಕಲ್ ಸೀರೆ ತೊಟ್ಟು, ಮೈಸೂರು ಪೇಟ, ಮಾಸ್ಕ್ ಧರಿಸಿ, ಕನ್ನಡ ಭಾವುಟ ಹಿಡಿದು ಬೈಕ್ ಏರಿ ರ್ಯಾಲಿ ನಡೆಸಿದ್ದು ವಿಶೇಷವಾಗಿತ್ತು.
ಟೆರೇಸ್ ಮೇಲೆ ಕನ್ನಡದ ಹಾಡಿಗೆ ಮಹಿಳೆಯರ ಹೆಜ್ಜೆ:
ಇನ್ನು ಬೆಂಗಳೂರಿನ ರಾಜಾಜಿನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ಮಹಿಳೆಯರು ಟೆರೇಸ್ ಮೇಲೆ ಕನ್ನಡ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಗಣಿನಾಡಲ್ಲಿ ಹಾರಾಡಿದ 65 ಉದ್ದ ಕನ್ನಡ ಧ್ವಜ:
ಇನ್ನೊಂದೆಡೆ ಗಣಿನಾಡು ಬಳ್ಳಾರಿಯಲ್ಲಿ ನವಕರ್ನಾಟಕ ಯುವ ಶಕ್ತಿ ಸಂಘಟನೆ ಕಾರ್ಯಕರ್ತರು ಬರೋಬ್ಬರಿ 65 ಅಡಿ ಉದ್ದದ ಕನ್ನಡ ಧ್ವಜಾರೋಹಣ ನೆರವೇರಿಸಿದ್ದಾರೆ.