ನವದೆಹಲಿ: ಎಲ್ಪಿಜಿ ಸಿಲಿಂಡರ್ ವಿತರಣೆಯಿಂದ ರೈಲ್ವೆ ಸಮಯದವರೆಗೆ ನವೆಂಬರ್ 1 ರಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರುವ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.
ಎಲ್ಪಿಜಿ ಸಿಲಿಂಡರ್ ವಿತರಣೆಗೆ ಹೊಸ ವ್ಯವಸ್ಥೆ ಜಾರಿಯಾಗಲಿದೆ. ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ತೈಲ ಕಂಪನಿಗಳು ವಿತರಣೆ ಕೋಡ್ ಜಾರಿಗೆ ತರಲಿದ್ದು ಗ್ರಾಹಕರು ಸಿಲಿಂಡರ್ ಬುಕ್ ಮಾಡಿದ ಸಂದರ್ಭದಲ್ಲಿ ಅವರ ಮೊಬೈಲಿಗೆ ಒಟಿಪಿ ಕಳಿಸಲಾಗುವುದು. ಸಿಲಿಂಡರ್ ಮನೆಗೆ ತಲುಪಿಸುವ ವ್ಯಕ್ತಿಗೆ ಒಟಿಪಿ ನೀಡಿದ ಬಳಿಕ ಸಿಲಿಂಡರ್ ನೀಡಲಾಗುತ್ತದೆ.
ಈಗಾಗಲೇ ಪ್ರಾಯೋಗಿಕವಾಗಿ ರಾಜಸ್ಥಾನದ ಜೈಪುರದಲ್ಲಿ ಯೋಜನೆ ಜಾರಿಯಾಗಿದ್ದು ಮೊದಲ ಹಂತದಲ್ಲಿ 100 ಸ್ಮಾರ್ಟ್ ಸಿಟಿಗಳಲ್ಲಿ ಯೋಜನೆ ಜಾರಿಯಾಗುತ್ತದೆ. ಎಲ್ಪಿಜಿ ಸಿಲಿಂಡರ್ ಗಳನ್ನು ಪಡೆಯುವ ಗ್ರಾಹಕರು ತಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನೀಡಿದಾಗ ಮಾತ್ರ ಎಲ್ಪಿಜಿ ಸಿಲಿಂಡರ್ ವಿತರಿಸಲಾಗುತ್ತದೆ.
ಇನ್ನು ಇಂಡೇನ್ ಗ್ಯಾಸ್ ಗ್ರಾಹಕರಿಗಾಗಿ ಬುಕಿಂಗ್ ಸಂಖ್ಯೆಯನ್ನು ನವೆಂಬರ್ 1 ರಿಂದ ಬದಲಾಯಿಸಲಾಗುತ್ತದೆ. ಗ್ಯಾಸ್ ಬುಕಿಂಗ್ ಮಾಡಲು ಗ್ರಾಹಕರು ಹೊಸ ಸಂಖ್ಯೆಗೆ ಕರೆ ಮತ್ತು ಎಸ್ಎಂಎಸ್ ಮಾಡಬಹುದು. ದೇಶವ್ಯಾಪಿ ಇಂಡೇನ್ ಗ್ಯಾಸ್ ಗ್ರಾಹಕರಿಗೆ 77189 55555 ಸಂಖ್ಯೆ ಒಂದೇ ಆಗಿರುತ್ತದೆ.
ಇನ್ನು ನಾಳೆಯಿಂದ ಭಾರತೀಯ ರೈಲ್ವೆ ದೇಶಾದ್ಯಂತ ಅನೇಕ ರೈಲುಗಳ ಸಮಯದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಿದೆ. ಅಕ್ಟೋಬರ್ 31 ರಿಂದ ಬದಲಾವಣೆಗೆ ತೀರ್ಮಾನಿಸಲಾಗಿತ್ತು. ಕಾರಣಾಂತರದಿಂದ ನವೆಂಬರ್ 1 ರಿಂದ ಸಂಚಾರದಲ್ಲಿ ಬದಲಾವಣೆಯಾಗಿದೆ. ತೇಜಸ್ ಎಕ್ಸ್ ಪ್ರೆಸ್ ನವೆಂಬರ್ 1 ರಿಂದ ಹಳಿ ಮೇಲೆ ಸಂಚರಿಸಲಿದೆ. ಅತಿ ವೇಗದ ರೈಲು ಕೇವಲ 3 ಗಂಟೆ ಅವಧಿಯಲ್ಲಿ ದೆಹಲಿ –ಚಂಡೀಗಢ ನಡುವೆ ಸಂಚರಿಸಲಿದೆ.
ದೆಹಲಿ ಸರ್ಕಾರ ಭದ್ರತೆ ನೋಂದಣಿ ಫಲಕ, ಸ್ಟಿಕ್ಕರ್ ಗಳಿಗೆ ಆನ್ಲೈನ್ ಬುಕ್ಕಿಂಗ್ ಹೊಸ ವ್ಯವಸ್ಥೆ ಜಾರಿಗೆ ತರಲಿದೆ. ನವೆಂಬರ್ 1 ರಿಂದ ಪ್ರಾಯೋಗಿಕವಾಗಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಹೊಸ ವ್ಯವಸ್ಥೆ ಜಾರಿಯಾಗಲಿದೆ.