ಇಂದಿರಾ ಗಾಂಧಿಯವರು ದೇಶದ ಏಕತೆಗಾಗಿ ಪ್ರಾಣತ್ಯಾಗ ಮಾಡಿದರು. ಬಿಜೆಪಿಯವರು ಗಾಂಧಿ ಕೊಂದ ವಂಶಸ್ಥರು. ಆದರೂ ಪ್ರಧಾನಿ ಮೋದಿಯಾದಿಯಾಗಿ ಬಿಜೆಪಿ ನಾಯಕರು ತಮ್ಮನ್ನು ಮಹಾನ್ ದೇಶಭಕ್ತರೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸರ್ದಾರ್ ಪಟೇಲರಿಗೂ ಬಿಜೆಪಿಗೂ ಏನು ಸಂಬಂಧ? ಮಹಾತ್ಮಾ ಗಾಂಧೀಜಿ ಕೊಂದ ಗೋಡ್ಸೆ ಆರ್.ಎಸ್.ಎಸ್. ನವರು. ಗಾಂಧಿ ಕೊಂದ ವಂಶಸ್ಥರು ಹೇಗೆ ದೇಶಭಕ್ತರಾಗುತ್ತಾರೆ? ಅಂದು ಆರ್.ಎಸ್.ಎಸ್. ನ್ನು ರದ್ದು ಮಾಡಿದ್ದೇ ಸರ್ದಾರ್ ಪಟೇಲರು. ಈಗ ಸರ್ದಾರ್ ಪಟೇಲರ ಹೆಸರು ಹೇಳಿ ಬಿಜೆಪಿಯವರು ತಾವು ದೇಶಭಕ್ತರಾಗಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ನಮಗೆ ಸರ್ದಾರರ ಏಕತಾ ಪ್ರತಿಮೆ ಬಗ್ಗೆ ವಿರೋಧವಿಲ್ಲ. ಆದರೆ ಬಿಜೆಪಿಯವರು ನೆಹರು ಹಾಗೂ ಸರ್ದಾರ್ ಪಟೇಲರ ಸಂಬಂಧವನ್ನು ತಿರುಚುತ್ತಿದ್ದಾರೆ. ಬಿಜೆಪಿ ನಾಯಕರು ಇತಿಹಾಸ ತಿರುಚುವುದರಲ್ಲಿ ನಿಸ್ಸೀಮರು ಎಂದು ಗುಡುಗಿದರು.