ನವದೆಹಲಿ: ಕೊರೋನಾ ಲಸಿಕೆಯನ್ನು ಎಲ್ಲರಿಗೂ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಯೋಜನೆ ರೂಪಿಸಿದ್ದು ಮೊದಲ ಹಂತದಲ್ಲಿ ವೈದ್ಯರು, ನರ್ಸ್ ಗಳು ಸೇರಿದಂತೆ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲು ಮಾಹಿತಿ ಕಲೆಹಾಕಲಾಗಿದೆ.
ಕೊರೋನಾ ಲಸಿಕೆ ವಿತರಣೆ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವಂತೆ ಕೇಂದ್ರ ಸರ್ಕಾರದ ವತಿಯಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ಸೂಚನೆ ನೀಡಲಾಗಿದೆ.
ಕೊರೋನಾ ಲಸಿಕೆಯ ಕುರಿತಂತೆ ವದಂತಿ ಹರಡದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಬೇಕು. ಆರೋಗ್ಯ ಸೇವೆಗಳಿಗಾಗಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಮಂತ್ರಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯಗಳಲ್ಲಿ ಪ್ರಧಾನ ಸಮಿತಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಕಾರ್ಯ ಪಡೆ ರಚಿಸಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ಕಾರ್ಯಪಡೆಗಳನ್ನು ರಚಿಸಬೇಕೆಂದು ಸಲಹೆ ನೀಡಲಾಗಿದೆ. ಇದರೊಂದಿಗೆ ಸಮಿತಿಯ ಕಾರ್ಯಗಳನ್ನು ಕೂಡ ತಿಳಿಸಲಾಗಿದ್ದು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.