ಬೆಂಗಳೂರು: ಉಪಚುನಾವಣಾ ದಿನ ಸಮೀಪಿಸುತ್ತಿದ್ದಂತೆ ಚುನಾವಣಾ ಅಖಾಡ ಕಾವೇರುತ್ತಿದೆ. ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷದ ನಾಯಕರು ದಿನಕ್ಕೊಂದು ಕಸರತ್ತು ಮಾಡುತ್ತಿದ್ದಾರೆ. ಶಿರಾ ಹಾಗೂ ಆರ್.ಆರ್.ನಗರ ಬೈ ಎಲೆಕ್ಷನ್ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಪ್ರತಿಷ್ಠೆಯ ಕಣವಾಗಿದ್ದು, ಜಿದ್ದಿಗೆ ಬಿದ್ದಂತೆ ಮತದಾರರ ಓಲೈಕೆಗಾಗಿ ನಾನಾ ಕಸರತ್ತು ಮಾಡುತ್ತಿದ್ದಾರೆ.
ಬಿಜೆಪಿ ನಾಯಕರು ಆರ್.ಆರ್.ನಗರದಲ್ಲಿ ಮುನಿರತ್ನ ಪರ ಸ್ಟಾರ್ ನಟ-ನಟಿಯರನ್ನೇ ಪ್ರಚಾರಕ್ಕೆ ಕರೆತಂದು ಮತಯಾಚಿಸಿದರೆ, ಶಿರಾದಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಖಾಡಕ್ಕಿಳಿದಿದ್ದಾರೆ. ಮತ್ತೊಂದೆಡೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಭ್ಯರ್ಥಿ ಪರ ಶಿರಾದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಈ ನಡುವೆ ಕಾಂಗ್ರೆಸ್ ನಾಯಕರೂ ಎರಡೂ ಕ್ಷೇತ್ರಗಳಲ್ಲಿ ಪೈಪೋಟಿಯಲ್ಲಿ ಪ್ರಚಾರ ನಡೆಸಿದ್ದಾರೆ. ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಶಾಸಕ ಜಮೀರ್ ಅಹ್ಮದ್ ಮತದಾದರ ಮನೆಗಳಿಗೆ ಹೋಗಿ ಚಹಾ ತಯಾರಿಸಿ ಕೊಟ್ಟಿದ್ದಾರೆ.
ಒಂದೆಡೆ ಬುಲೆಟ್ ಓಡಿಸಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ಜಮೀರ್ ಅಹ್ಮದ್, ಮತ್ತೊಂದೆಡೆ ಭುವನೇಶ್ವರಿ ನಗರದಲ್ಲಿ ಮತದಾರರ ಮನೆಗೆ ತೆರಳಿ ಸ್ವತಃ ಟೀ ಮಾಡಿ ಎಲ್ಲರಿಗೂ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.