ಮುಂಬೈ: ಕೊರೊನಾ ಭೀತಿಯಿಂದಾಗಿ ದೇಶದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದಾಗ್ಯೂ ಹಲವರು ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ಮೆರೆಯುತ್ತಿದ್ದಾರೆ. ಹೀಗಾಗಿ ಮುಂಬೈ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮವೊಂದನ್ನು ಜಾರಿಗೆ ತಂದಿದೆ.
ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವರು 200 ರೂ. ದಂಡ ಪಾವತಿಸಲೇಬೇಕು. ಒಂದು ವೇಳೆ ದಂಡದ ಮೊತ್ತ ಕಟ್ಟದಿದ್ದರೆ ಒಂದು ಗಂಟೆ ಕಾಲ ರಸ್ತೆ ಕಸ ಗುಡಿಸಬೇಕು. ಇಂತಹ ಕಠಿಣ ನಿಯಮವನ್ನು ಅಂಧೇರಿ ವೆಸ್ಟ್, ಜುಹು, ವಾರ್ಸೋವಾದಂತಹ ಪ್ರತಿಷ್ಠಿತ ಪ್ರದೇಶವಿರುವ ಕೆ.ವೆಸ್ಟ್ ನಲ್ಲಿ ಜಾರಿಗೆ ತರಲಾಗಿದೆ.
ಈಗಾಗಲೇ ಮಾಸ್ಕ್ ಧರಿಸದೇ ದಂಡ ಕಟ್ಟಲಾಗದ 35 ಜನರು ರಸ್ತೆ ಕಸ ಗುಡಿಸಿರುವುದಾಗಿ ಬಿಎಂಸಿ ಆಯುಕ್ತರು ತಿಳಿಸಿದ್ದಾರೆ.