ಪ್ರಧಾನ ಮಂತ್ರಿ ಬೀದಿ ಬದಿ ವರ್ತಕರ ಆತ್ಮನಿರ್ಭರ ನಿಧಿ ಯೋಜನೆ (PM SVANidhi Scheme) ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಮಾಲೋಚನೆ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ವರ್ತಕರ ಯೋಗಕ್ಷೇಮ ವಿಚಾರಿಸಿದ್ದಾರೆ.
10,000 ರೂ.ಗಳ ವರೆಗೂ ಆರ್ಥಿಕ ನೆರವು ಸ್ವೀಕರಿಸಿದ ಉತ್ತರ ಪ್ರದೇಶದ ವರ್ತಕರ ಜೊತೆಗೆ ಮಾತನಾಡುತ್ತಾ, ಯೋಜನೆಯ ಅನುಷ್ಠಾನ ಯಾವ ಮಟ್ಟಿಗೆ ಆಗಿದೆ ಎಂದು ತಿಳಿಯುತ್ತಿದ್ದ ಮೋದಿ, ಖುದ್ದು ಈ ಯೋಜನೆಯಡಿ ಮೂರು ಲಕ್ಷ ವರ್ತಕರಿಗೆ ಯೋಜನೆಯಡಿ ನೆರವನ್ನು ವಿತರಿಸಿದ್ದಾರೆ.
ಲಾಕ್‌ಡೌನ್ ವೇಳೆಯಲ್ಲಿ ವರ್ತಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅವರನ್ನೇ ಕೇಳಿ ತಿಳಿದುಕೊಂಡ ಮೋದಿ ಇದೇ ವೇಳೆ ಮೋಮೋ ವ್ಯಾಪಾರಿಯೊಬ್ಬರೊಂದಿಗೆ ಮಾತನಾಡಿದ ಕ್ಷಣ ಸಖತ್ ವೈರಲ್ ಆಗಿದೆ.
“ವಾರಣಾಸಿಯಲ್ಲಿ ಮೋಮೋ ಬಹಳ ಜನಪ್ರಿಯವಾಗಿದೆ ಎಂದು ಕೇಳಿದ್ದೇನೆ. ಆದರೆ ನನಗೆ ಮಾತ್ರ ಯಾರೂ ಇನ್ನೂ ಮೋಮೋ ತಿನ್ನಿ ಎಂದು ಕೊಟ್ಟಿಲ್ಲ” ಎಂದು ಮೋಮೋ ಮಾರಾಟಗಾರರೊಬ್ಬರ ಜೊತೆಗೆ ಮಾತನಾಡುವ ವೇಳೆ ಪ್ರಧಾನಿ ಮಾತಿನ ಚಟಾಕಿ ಹಾರಿಸಿದ್ದಾರೆ.