ಕಲಬುರ್ಗಿ: ನ್ಯೂಸ್ ಚಾನಲ್ ರಿಪೋರ್ಟರ್ ಎಂದು ಹೇಳಿಕೊಂಡಿದ್ದ ಮೂವರು ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದು ಅವರನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ.
ಗಿರೀಶ್ ತುಂಬಗಿ, ಗುಂಡು ಗುತ್ತೇದಾರ್ ಮತ್ತು ರವಿಚಂದ್ರ ಗುತ್ತೇದಾರ್ ಬಂಧಿತರು ಎಂದು ಹೇಳಲಾಗಿದೆ. ಆರೋಪಿಗಳು ಲಾರಿ ಚಾಲಕನನ್ನು ಬೆದರಿಸಿ 3.50 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ಜೇವರ್ಗಿ ಹೊರವಲಯದಲ್ಲಿ ಲಾರಿ ಅಡ್ಡಗಟ್ಟಿದ ಆರೋಪಿಗಳು ಕಳ್ಳತನ ಮಾಡಿದ ಅಕ್ಕಿ ಸಾಗಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಟಿವಿ ಚಾನೆಲ್ ನಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ಹಣ ಕೊಡುವಂತೆ ಕೇಳಿದ್ದಾರೆ.
ಲಾರಿ ಚಾಲಕ ಸಂದೀಪ್ ರಾಥೋಡ್ ಯಾದಗಿರಿ ಜಿಲ್ಲೆಯಿಂದ ಬೀದರ್ ಜಿಲ್ಲೆಗೆ ಅಕ್ಕಿ ಸಾಗಿಸುತ್ತಿದ್ದಾಗ ಬೆದರಿಸಿ ಹಣ ವಸೂಲಿ ಮಾಡಲಾಗಿದೆ. ಜೇವರ್ಗಿ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.