ಹಾವೇರಿ; ನವರಾತ್ರಿ ಹಿನ್ನೆಲೆಯಲ್ಲಿ ನಡೆದ ದುರ್ಗಾದೇವಿ ಜಾತ್ರೆಯಲ್ಲಿ ಸ್ವಾಮೀಜಿಯೊಬ್ಬರು ಮಗುವನ್ನು ಒಂದು ಕೈಲಿ ಎತ್ತಿಹಿಡಿದು ಕೆಂಡ ಹಾಯ್ದ ಭಯಾನಕ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಮೂಢನಂಬಿಕೆ ಹೆಸರಲ್ಲಿ ಮಗುವನ್ನೇ ಅಪಾಯಕ್ಕೆ ತಳ್ಳಿದ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಹಾವೇರಿ ಜಿಲ್ಲೆಯ ಬುಳ್ಳಪುರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆಯಲ್ಲಿ ಸ್ವಾಮೀಜಿ ಹರಕೆ ನೆಪದಲ್ಲಿ ಭಕ್ತರೊಬ್ಬರ ಗಂಡು ಮಗುವನ್ನು ಎಡಗೈಲಿ ಎತ್ತಿಹಿಡಿದು, ಕೆಂಡದ ಮೇಲೆ ಹಾದು ಹೋಗಿದ್ದಾರೆ. ಭಯಭೀತಗೊಂಡ ಮಗು ಅಳುತ್ತಿದ್ದರೂ ಸ್ವಾಮೀಜಿ ಕ್ಯಾರೇ ಎನ್ನದೆ ಮಗು ಎತ್ತಿ ನಡೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಗು ಆಯತಪ್ಪಿ ಕೆಂಡದಲ್ಲಿ ಬಿದ್ದರೆ ಗತಿ ಏನು ಎಂದು ಸ್ವಾಮೀಜಿ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಕ್ತಿ, ಹರಕೆಯ ಹೆಸರಲ್ಲಿ ಇಂತಹ ಮೂಢನಂಬಿಕೆಗಳ ಆಚರಣೆ ನಡೆಯುತ್ತಿರುವುದು ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಪೊಲೀಸರು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ.