ಕಲಬುರಗಿ: ತಾಜ್ ವೆಸ್ಟೆಂಡ್ ನಲ್ಲಿ ಕುಳಿತುಕೊಂಡು ಸರ್ಕಾರ ನಡೆಸಲು ಆಗುತ್ತಾ? ನನ್ನ ಹೇಳಿಕೆಯಿಂದ ಕುಮಾರಸ್ವಾಮಿಗೆ ಮುಜುಗರ ಆಗುತ್ತದೆಯೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.
ಕಲ್ಬುರ್ಗಿಯಲ್ಲಿ ಮಾತನಾಡಿದ ಅವರು, ನಾನು ಯಾವತ್ತೂ ವಿಲನ್ ಆಗಿ ಕೆಲಸವನ್ನು ಮಾಡಿಲ್ಲ. ನಾನು ಹೀರೋ ಪಾತ್ರವನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದ 23 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದ ರೈತರು, ಜನರು ಸಂಕಷ್ಟದಲ್ಲಿದ್ದರೂ ಸಚಿವರು ಇತ್ತ ತಲೆ ಹಾಕಿಲ್ಲ. ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ಜಿಲ್ಲೆಗೆ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಕಿಡಿಕಾರಿದ ಅವರು, ಕಂದಾಯ ಸಚಿವರು ಪಿಕ್ ನಿಕ್ ಗೆ ಬಂದಂತೆ ಬಂದು ಹೋಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಹಾರಾಟ ನಡೆಸಿ ತೆರಳಿದ್ದಾರೆ. ಯಡಿಯೂರಪ್ಪನವರಿಗೆ ಮೇಲಿಂದ ಏನೂ ಕಾಣಿಸಿತೋ ಗೊತ್ತಿಲ್ಲ. ಒಬ್ಬನೇ ಒಬ್ಬ ನೆರೆ ಸಂತ್ರಸ್ತರ ಸಂಕಷ್ಟವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕೇಳಿಲ್ಲ. ಮುಖ್ಯಮಂತ್ರಿ ಮತ್ತು ಸಚಿವರು ಈ ರೀತಿ ನಡೆದುಕೊಳ್ಳುತ್ತಿದ್ದರೆ ಅಧಿಕಾರಿಗಳಿಗೆ ಲಂಗುಲಗಾಮಿಲ್ಲದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಯಾಪೈಸೆ ಪರಿಹಾರ ನೀಡಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.