ಮುಂಬೈ: ಮುಂಬೈನ ಪೊವಾಯಿ ಪ್ರದೇಶದಲ್ಲಿ ನಡೆದ ಭಯಾನಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 8 ವರ್ಷದ ಹೆಣ್ಣು ನಾಯಿ ಗಂಭೀರವಾಗಿ ಗಾಯಗೊಂಡಿದೆ.
ಪೊವಾಯಿ ಪ್ರದೇಶದ ಗ್ಯಾಲರಿಯಾ ಮಾಲ್ ನಲ್ಲಿ ‘ನೂರಿ’ ಹೆಸರಿನ ಹೆಣ್ಣು ನಾಯಿ ಮೇಲೆ ದೌರ್ಜನ್ಯ ಎಸಗಲಾಗಿದೆ. ಖಾಸಗಿ ಭಾಗದಲ್ಲಿ 11 ಇಂಚಿನ ಮರದ ಕೋಲು ಸೇರಿಸಲ್ಪಟ್ಟಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಯಿಯನ್ನು ದೇವಿ ಶೆತ್ ಅವರು ರಕ್ಷಿಸಿದ್ದಾರೆ. ಅನಿಮಲ್ ಕೇರ್ ಸೆಂಟರ್ ಗೆ ನಾಯಿಯನ್ನು ಕರೆದುಕೊಂಡು ಹೋಗಿ ಖಾಸಗಿ ಭಾಗದಿಂದ ಮರದ ಸ್ಟಿಕ್ ತೆಗೆದು ಚಿಕಿತ್ಸೆ ನೀಡಲಾಗಿದೆ. ಆದರೂ, ನಾಯಿ ಸ್ಥಿತಿ ಗಂಭೀರವಾಗಿದೆ.
ಘಟನೆ ಬಗ್ಗೆ ಮಾತನಾಡಿದ ಒನ್ ದೇವಿ ಶೆತ್, ನನಗೆ ಬಂದ ವಿಡಿಯೋ ಗಮನಿಸಿ ಪೊವಾಯಿ ಗ್ಯಾಲರಿಯಾ ಮಾಲ್ ಗೆ ತಾಯಿಯೊಂದಿಗೆ ತೆರಳಿದಾಗ ರಕ್ತದ ಮಡುವಿನಲ್ಲಿ ‘ನೂರಿ’ ಬಿದ್ದಿರುವುದು ಕಂಡು ಬಂದಿತ್ತು. ಅದಕ್ಕೆ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ನಾಯಿ ಸಂಕಷ್ಟದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ದಾರಿ ಹೋಕರು ಕಂಡರೂ ಕಾಣದಂತೆ ಓಡಾಡುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಂಬೆ ಅನಿಮಲ್ ರೈಟ್ಸ್ ವತಿಯಿಂದ ನೂರಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲಾಗಿದ್ದು, ಪೊವಾಯಿ ಪೊಲೀಸರು ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ, ಪ್ರಾಣಿಗಳ ಮೇಲೆ ಕಿಡಿಗೇಡಿತನ ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.