ಎರಡು ದಶಕಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದ ಹೊಣೆಯನ್ನು ಪಾಕಿಸ್ತಾನ ಸೇನೆಯಲ್ಲಿದ್ದ ’ಕೆಲ ಮುಖ್ಯಸ್ಥರ’ ಹೆಗಲಿಗೆ ಏರಿಸಿದ್ದಾರೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್.
1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಪಾಕ್ ಪ್ರಧಾನಿಯಾಗಿದ್ದ ಶರೀಫ್ ಮಾತನಾಡಿ, “ಕಾರ್ಗಿಲ್ ನಲ್ಲಿ ನಮ್ಮ ನೂರಾರು ಯೋಧರ ಸಾವಿಗೆ ಕೆಲವು ಜನ ಹೊಣೆಯಾಗಿದ್ದಾರೆ. ಈ ಯುದ್ಧ ಕೆಲ ಮುಖ್ಯಸ್ಥರ ತೀರ್ಮಾನವಾಗಿತ್ತು. ನಮ್ಮನ್ನು ಯುದ್ಧಕ್ಕೆ ಬಲವಂತವಾಗಿ ತಳ್ಳಲಾಯಿತು. ಪರ್ವತದ ತುದಿಗಳಲ್ಲಿರುವ ನಮ್ಮ ಸೈನಿಕರು ಆಹಾರ ಹಾಗೂ ಮದ್ದು-ಗುಂಡುಗಳಿಲ್ಲದೇ ಪ್ರಾಣತ್ಯಾಗ ಮಾಡಿದರು ಎನ್ನಲು ನನಗೆ ನೋವಾಗುತ್ತದೆ. ಇದರಿಂದ ದೇಶ ಹಾಗೂ ಸಮಾಜ ಸಾಧಿಸಿದ್ದಾದರೂ ಏನು?” ಎಂದು ಪ್ರಶ್ನಿಸಿದ್ದಾರೆ.
ಮೂರು ತಿಂಗಳ ಮಟ್ಟಿಗೆ ಜರುಗಿದ ಕಾರ್ಗಿಲ್ ಯುದ್ಧದ ವೇಳೆ, ಕಾಶ್ಮೀರದ ದ್ರಾಸ್ ಹಾಗೂ ಬಟಾಲಿಕ್ ಪ್ರದೇಶಗಳ ಪರ್ವತಗಳ ಎತ್ತರದ ಪ್ರದೇಶಗಳಲ್ಲಿದ್ದ ಬಂಕರ್‌ಗಳಿಗೆ ಬಂದು ಕೂತಿದ್ದ ಪಾಕಿಸ್ತಾನೀ ಸೈನಿಕರು ಹಾಗೂ ಮುಜಾಹಿದೀನ್‌ಗಳನ್ನ ಭಾರತೀಯ ಸೇನೆ ತೆರವುಗೊಳಿಸಿತ್ತು.
ಸಾರ್ವಜನಿಕ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಶರೀಫ್, “2018ರ ಪಾಕಿಸ್ತಾನೀ ಚುನಾವಣೆಯನ್ನು ಸೇನಾ ಮುಖ್ಯಸ್ಥ ಬಾಜ್ವಾ ಅಪಹರಿಸಿದ್ದು, ಬಹುಮತಕ್ಕೆ ವಿರುದ್ಧವಾಗಿ ಇಮ್ರಾನ್ ಖಾನ್ ರನ್ನು ಪ್ರಧಾನಿಯಾಗಿ ಮಾಡಿದ್ದಾರೆ” ಎಂದು ಆರೋಪ ಮಾಡಿದ್ದಾರೆ.