ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಅಮಾಯಕಿ. ಈ ಪ್ರಕರಣಕ್ಕೂ ರಾಗಿಣಿಗೂ ಯಾವುದೇ ಸಂಬಂಧವಿಲ್ಲ ಎಂದು ರಾಗಿಣಿ ಪರ ವಕೀಲರು ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ಇಬ್ಬರು ನಟಿಯರ ಪರ ವಕೀಲರು ನಟಿಯರಿಗೆ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ.
ನಟಿ ರಾಗಿಣಿಗೂ ಹಾಗೂ ಡ್ರಗ್ಸ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಮನೆ ಮೇಲೆ ದಾಳಿಯಾದ ಸಂದರ್ಭದಲ್ಲಿ ಯಾವುದೇ ರೀತಿಯ ಡ್ರಗ್ಸ್ ಪತ್ತೆಯಾಗಿಲ್ಲ. ಆದಾಗ್ಯೂ ನಟಿಯನ್ನು ಗಂಭೀರ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ನಟಿ ರಾಗಿಣಿ ಜೈಲಿನಲ್ಲಿದ್ದಾರೆ. ಅನಗತ್ಯವಾಗಿ ನಟಿ ರಾಗಿಣಿಯನ್ನು ಈ ಗಂಭೀರ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ರಾಗಿಣಿಗೆ ಜಾಮೀನು ಮಂಜೂರು ಮಾಡುವಂತೆ ವಕೀಲರು ಮನವಿ ಮಾಡಿದ್ದಾರೆ.
ಇದೇ ವೇಳೆ ನಟಿ ಸಂಜನಾ ಪರ ವಕೀಲ ಅಸ್ಮತ್ ಪಾಷಾ ವಾದ ಮಂಡಿಸಿದ್ದು, ಪೊಲೀಸರು ಸರ್ಚ್, ಸೀಜ್ ನಿಯಮ ಪಾಲಿಸಿಲ್ಲ. ಸಂಜನಾ ಮನೆ ಹಾಗೂ ಕಚೇರಿಯಲ್ಲಿ ಯಾವುದೇ ಡ್ರಗ್ಸ್ ಕೂಡ ಪತ್ತೆಯಾಗಿಲ್ಲ. ಸಂಜನಾ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಆದಾಗ್ಯೂ ಕಾನೂನುಬಾಹಿರವಾಗಿ ಸಿಸಿಬಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದೆ. ಹೀಗಾಗಿ ಸಂಜನಾಗೆ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ರಾಗಿಣಿ ಹಾಗೂ ಸಂಜನಾ ಅವರಿಗೆ ಜಾಮೀನು ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.