ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗೆ ಹೃದಯಾಘಾತವಾಗಿದೆ. ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವಿನ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಪಿಲ್ ದೇವ್ ಅಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ಹೇಳಿದ್ದಾರೆ. 61 ವರ್ಷದ ಕಪಿಲ್ ದೇವ್ ಗೆ ಹೃದಯಾಘಾತವಾಗಿರುವ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪೋಸ್ಟ್ ಹಾಕ್ತಿದ್ದಾರೆ. ಕಪಿಲ್ ದೇವ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಕಪಿಲ್ ದೇವ್ ಕೆಲ ದಿನಗಳ ಹಿಂದೆ ತಮ್ಮ ಹೊಸ ಲುಕ್ ಫೋಟೋ ಪೋಸ್ಟ್ ಮಾಡಿದ್ದರು. ತಲೆ ಬೋಳಿಸಿದ್ದ ಕಪಿಲ್ ಗಡ್ಡ ಬಿಟ್ಟಿದ್ದರು. ಅವರ ಫೋಟೋಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. 1978 ರಲ್ಲಿ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕಪಿಲ್ ದೇವ್ ಟೆಸ್ಟ್ ನಲ್ಲಿ 5 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕಪಿಲ್ ದೇವ್ 225 ಏಕದಿನ ಪಂದ್ಯಗಳಲ್ಲಿ 253 ವಿಕೆಟ್ ಪಡೆದಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ಅನೇಕ ಸ್ಮರಣೀಯ ವಿಜಯಗಳನ್ನು ಗಳಿಸಿದೆ. ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ಮೊದಲ ವಿಶ್ವಕಪ್ ಗೆದ್ದಿತ್ತು.