ಬೆಂಗಳೂರು: ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ ಇನ್ನು ಮುಂದೆ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ಮುಂದುವರೆಯಲಿದೆ. ಭಾರತೀಯ ಜೀವವಿಮಾ ನಿಗಮ(ಎಲ್ಐಸಿ) ಬದಲಿಗೆ ಅಂಚೆ ಇಲಾಖೆಯ ಮೂಲಕ ಭಾಗ್ಯಲಕ್ಷ್ಮಿ ಯೋಜನೆಯನ್ನು ಮುಂದುವರೆಸಲು ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.
ಭಾಗ್ಯಲಕ್ಷ್ಮಿ ಯೋಜನೆಗೆ ಇನ್ನು ಮುಂದೆ ಎಸ್ಐಸಿ ಬದಲಿಗೆ ಅಂಚೆ ಇಲಾಖೆ ಏಜೆನ್ಸಿಯಾಗಿರುತ್ತದೆ. ಸುಕನ್ಯಾ ಸಮೃದ್ಧಿಯೋಜನೆಯ ಮೂಲಕ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲು ಈ ಹಿಂದೆಯೇ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿತ್ತು. ಸಚಿವ ಸಂಪುಟದ ಒಪ್ಪಿಗೆ ಇವಾಗ ಸಿಕ್ಕಿದ್ದು ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ. ಯೋಜನೆಯನ್ನು ಮರು ವಿನ್ಯಾಸದೊಂದಿಗೆ ಜಾರಿಗೊಳಿಸಲಾಗುತ್ತಿದೆ. ಫಲಾನುಭವಿಗಳಿಗೆ ಯಾವುದೇ ನಷ್ಟವಾಗುವುದಿಲ್ಲ. ಬಿಪಿಎಲ್ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಬಾಂಡ್ ನೀಡಲಾಗುತ್ತದೆ.
ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು. ಇತ್ತೀಚೆಗೆ ಎಲ್ಐಸಿ ತಕಾರರು ತೆಗೆದಿದ್ದ ಕಾರಣ ಫಲಾನುಭವಿಗಳಿಗೆ ಬಾಂಡ್ ಸಿಕ್ಕಿರಲಿಲ್ಲ ಎನ್ನಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಈ ಯೋಜನೆಯನ್ನು ಅಂಚೆ ಇಲಾಖೆಗೆ ವರ್ಗಾವಣೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.