ಕೊರೊನಾದಿಂದಾಗಿ ಎಲ್ಲಾ ಕೆಲಸಗಳಿಗೂ ಅಡ್ಡಿಯಾಗುತ್ತಿದೆ. ಹೆಚ್ಚು ಜನ ಸೇರೋದ್ರಿಂದ ಕೊರೊನಾ ಹರಡುವುದು ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ಸರ್ಕಾರಿ ಸೇವೆಗಳು, ಕೆಲಸಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದೀಗ ಎಲ್ಎಲ್ಆರ್, ಡಿಎಲ್ ಮಾಡಿಸುವ ಕ್ರಮದಲ್ಲೂ ಬದಲಾವಣೆ ತರಲಾಗಿದೆ.
ಹೌದು, ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ಅಭ್ಯರ್ಥಿಗಳು ಅಥವಾ ಸಾರ್ವಜನಿಕರು ಎಲ್ಎಲ್ಆರ್, ಡಿಎಲ್ ಪಡೆಯಲು ಆನ್ಲೈನ್ ಸ್ಲಾಟ್ ನಿಗದಿಪಡಿಸಿಕೊಳ್ಳುವಾಗ ಕಾಯುವ ಅವಧಿಯನ್ನು ಹೆಚ್ಚು ಮಾಡಲಾಗಿದೆ. ಮೂವತ್ತು ದಿನ ನಿಗದಿ ಪಡಿಸಿದ್ದಲ್ಲಿ ಹೆಚ್ಚು ಜನ ಕಚೇರಿಗಳಿಗೆ ಬರುತ್ತಾರೆ ಎಂಬ ಕಾರಣಕ್ಕೆ ಇದನ್ನು ಬದಲಾಯಿಸಲಾಗಿದೆ.
ಆನ್ಲೈನ್ ಮೂಲಕ ಸ್ಲಾಟ್ ನಿಗದಿಪಡಿಸಿಕೊಳ್ಳುವಾಗ ಕಾಯುವ ಅವಧಿಯನ್ನು ಮೂವತ್ತು ದಿವಸಗಳಿಂದ ಮೂರು ತಿಂಗಳ ಅಂದರೆ 90 ದಿನಗಳವರೆಗೆ ವಿಸ್ತರಿಸಿಲಾಗಿದೆ. ಈ ಸಮಯದಲ್ಲಿ ನೀಡಿರುವ ಅವಧಿಯು ಮೀರದಿರುವಂತೆ ಕಛೇರಿಯ ಮುಖ್ಯಸ್ಥರು ತಮ್ಮ ಹಂತದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರಿಗೆ ಆಯುಕ್ತರು ಸೂಚಿಸಿದ್ದಾರೆ.