ಭಾರೀ ಮಳೆಯ ಕಾರಣ ಈರುಳ್ಳಿ ಬೆಲೆ ದಿಢೀರ್ ಏರಿಕೆ ಕಂಡಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಕೆಜಿ ಈರುಳ್ಳಿ ದರ 120 ರೂ. ತಲುಪಿದೆ.
ಕೆಜಿಗೆ 70 ರೂ. ಇದ್ದ ಈರುಳ್ಳಿ ಬೆಲೆ 120 ರೂಪಾಯಿಗೆ ಏರಿಕೆಯಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕದಲ್ಲಿ ಭಾರೀ ಮಳೆಯ ಕಾರಣ ಈರುಳ್ಳಿ ಬೆಳೆ ಹಾಳಾಗಿ ಪೂರೈಕೆ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಈರುಳ್ಳಿ ದರ ಹೆಚ್ಚಾಗಿದೆ.
ಮಂಗಳೂರಿನಲ್ಲಿ ಹೋಲ್ಸೇಲ್ ಈರುಳ್ಳಿ ಕೆಜಿಗೆ 90 ರೂ.ಗೆ ಮಾರಾಟವಾಗಿದ್ದು ನಗರ ಮತ್ತು ಗ್ರಾಮಾಂತರ ಪ್ರದೇಶದ ಅಂಗಡಿಗಳಲ್ಲಿ 110 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿಯಿಂದ ಪೂರೈಕೆಯಾಗುತ್ತಿದ್ದ ಈರುಳ್ಳಿ ಪ್ರಮಾಣ ಕಡಿಮೆಯಾಗಿದೆ.
ಇನ್ನೂ ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಈರುಳ್ಳಿ ಮೇಲಿನ ಆಮದು ನಿರ್ಬಂಧಗಳನ್ನು ಸಡಿಲಿಸಿದೆ. ಡಿಸೆಂಬರ್ 15 ಆಮದು ಮೇಲಿನ ನಿರ್ಬಂಧ ಸಡಿಲಕ್ಕೆ ಮಾಡಿದ್ದು ದೇಶಿಯ ಪೂರೈಕೆ ಹೆಚ್ಚಳ, ಈ ಮೂಲಕ ಬೆಲೆ ಏರಿಕೆ ನಿಯಂತ್ರಣಕ್ಕೆ ವಾಣಿಜ್ಯ ಸಚಿವಾಲಯ ಕ್ರಮ ಕೈಗೊಂಡಿದೆ.
ಈರುಳ್ಳಿಗೆ ಭರ್ಜರಿ ಬೆಲೆ ಬಂದಿದ್ದರೂ ರೈತರ ಬಳಿ ಈರುಳ್ಳಿ ಇಲ್ಲವಾಗಿದೆ. ನೆರೆಹಾನಿಯಿಂದ ಹೊಲದಲ್ಲಿನ ಬೆಳೆ ಹಾಳಾಗಿದೆ. ಕೊಯ್ಲು ಮಾಡಿದ್ದ ಈರುಳ್ಳಿಯೂ ಕೊಳೆತಿದೆ. ಅಲ್ಪಸ್ವಲ್ಪ ಈರುಳ್ಳಿಯನ್ನು ರೈತರು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.