ಬೆಂಗಳೂರು: ಶಿಕ್ಷಕರ ಮತ್ತು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಕೂಡಲೇ ಆರಂಭಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಸಿಎಂ ಯಡಿಯೂರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತಕ್ಷಣ ವರ್ಗಾವಣೆ ಪ್ರಕ್ರಿಯೆ ಆರಂಭಿಸುವಂತೆ ಆದೇಶಿಸಿದ್ದಾರೆ.
ವರ್ಗಾವಣೆ ಮಾರ್ಗಸೂಚಿ ಹೊರಡಿಸಿ 5 ತಿಂಗಳಾದರೂ ವರ್ಗಾವಣೆ ವೇಳಾಪಟ್ಟಿ ಹೊರಡಿಸಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಸಿಎಂ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರ ಮತ್ತು ಉಪನ್ಯಾಸಕರ ವರ್ಗಾವಣೆಗೆ ತಕ್ಷಣ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿ ನವೆಂಬರ್ 5 ರಿಂದಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.